ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಅಧಿಕಾರಕ್ಕೆ ನಾನು ಸೊನ್ನೆ ಅಂಕ ನೀಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದ್ರ ಜೊತೆಗೆ ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ರು.
ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನೆರೆ ಸಂತ್ರಸ್ತರ ವಿಚಾರದಲ್ಲಿ ನಾನು ದಾಖಲೆ, ಮಾಹಿತಿ ಇಲ್ಲದೇ ಯಾವುದೇ ಮಾತನಾಡಿಲ್ಲ. ಅಧಿಕಾರಿಗಳಿಂದ ವಿವರ ಪಡೆದು, ಸ್ಥಳ ಪರಿಶೀಲಿಸಿ ಮಾತಾಡಿದ್ದೇನೆ. ಸುಳ್ಳು ನಾನು ಹೇಳುತ್ತಿದ್ದೇನಾ? ಯಡಿಯೂರಪ್ಪ ಹೇಳುತ್ತಿದ್ದಾರಾ? ಎನ್ನುವುದಕ್ಕೆ ಪ್ರವಾಹ ಸಂತ್ರಸ್ತರು ಸಾಕ್ಷಿಯಾಗಿದ್ದಾರೆ. ಮಾಧ್ಯಮ ವರದಿ ಸತ್ಯದರ್ಶನ ನೀಡಿದೆ. ಪ್ರವಾಹ ಬಂದಾಗ ಆಡಿದ ಮಾತು ಒಂದು, ಈಗ ನೀಡುತ್ತಿರುವ ಪರಿಹಾರ ಇನ್ನೊಂದಾಗಿದೆ. ಮಗ್ಗ, ಅಂಗಡಿ ಮುಂಗಟ್ಟು, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಿಲ್ಲ. ನಿರಾಶ್ರಿತರ ಸಂಪೂರ್ಣ ಸರ್ವೇ ಆಗಿಲ್ಲ. ಮನೆ ಪರಿಹಾರ ಎಲ್ಲರಿಗೂ ಏಕೆ ನೀಡಿಲ್ಲ. ಮನೆ ಕೊಚ್ಚಿ ಹೋದವರಿಗೆ ಪರಿಹಾರ ಕೊಟ್ಟಿಲ್ಲ. ಎರಡನೇ ಬಾರಿ ಪ್ರವಾಹ ಬಂದಿದೆ. ಮನೆ, ಬೆಳೆ ಕೊಚ್ವಿ ಹೋಗಿದೆ. ಇದರ ಸರ್ವೇ ಆಗಿದೆಯೇ? ಪ್ರವಾಹ ನಿಂತ ನಂತರ ಬಿದ್ದ ಮನೆಗಳ ಸರ್ವೇ ಆಗಿಲ್ಲ. 2004, 2005, 2009 ಮತ್ತು ಈಗ ಇಡೀ ಊರು ಮುಳುಗಡೆ ಆಗಿದೆ. ಊರನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದಿದ್ದಾರೆ. ಅದಕ್ಕೆ ಕ್ರಮ ಕೈಗೊಂಡಿಲ್ಲ. ಇನ್ನು 2009 ರಲ್ಲಿ ಕಟ್ಟಿಸಿದ ಆಸರೆ ಮನೆಗಳನ್ನು ಯಾರೂ ಬಳಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ. 15 ಗೆದ್ದರೂ ಅಚ್ಚರಿ ಇಲ್ಲ. ಸಂಘಟಿತವಾಗಿ ಪಕ್ಷ ಹೋರಾಟ ಮಾಡಿ ಗೆಲ್ಲಲಿದೆ. ಸರ್ಕಾರದ ಆಡಳಿತ ಜನರಿಗೆ ಬೇಸರ ತರಿಸಿದೆ. ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ಜನ ತಿರಸ್ಕರಿಸಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇದಕ್ಕೆ ಸಾಕ್ಷಿ. ಹಾಗಾಗಿ ಈ ಬಾರಿ ನಮ್ಮ ಪರ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲೂ ತೊಂದರೆ ಇಲ್ಲ. ಅಭ್ಯರ್ಥಿ ಆಯ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿದ್ದು. ಸುಳ್ಳು ಹೇಳುವುದು ಬಿಜೆಪಿ ಜನ್ಮಸಿದ್ಧ ಹಕ್ಕು. ಟಿಪ್ಪು ಪೇಟ ಧರಿಸಿದ ಅಶೋಕ್, ಚಂದ್ರೇಗೌಡ, ಜಗದೀಶ್ ಶೆಟ್ಟರ್ ಮತಾಂಧರಾ? 2013 ರಲ್ಲಿ ನಾನೇ ಟಿಪ್ಪು, ಈಗ ಟಿಪ್ಪು ಮತಾಂಧ ಅಂತ ಹೇಳಿದ್ದು ಮಿಸ್ಟರ್ ಯಡಿಯೂರಪ್ಪ. ಯಾರು ಸ್ವಾತಂತ್ರ್ಯ ಹೋರಾಟಗಾರ, ಯಾರು ಮತಾಂಧ? ಮತಕ್ಕಾಗಿ ಇಂತಹ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಸಿದ್ದು ಟೀಕಿಸಿದ್ರು.
ಯಡಿಯೂರಪ್ಪ ಸರ್ಕಾರ ಬಹುಮತ ಇಲ್ಲದೇ ಬಂದಿದ್ದು. ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಸರ್ಕಾರ ರಚಿಸುವ ಅವಕಾಶ ಸಿಕ್ಕಿತ್ತು. ಸರಾಸರಿ ಮತದಲ್ಲಿ ಅವರು ನಮಗಿಂತ ಹಿಂದಿದ್ದರು. ನಮಗಿಂತ ಶೇ. 1.8 ರಷ್ಟು ಕಡಿಮೆ ಮತ ಪಡೆದಿದ್ದರು. ಈಗ ಹಿಂಬಾಗಿಲಿನದ ಮತ್ತೆ ಸರ್ಕಾರ ಮಾಡಿದ್ದಾರೆ. ಇದು ಅನೈತಿಕ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ರು.