ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರವಾಣಿ ಮೂಲಕ ಶುಭ ಹಾರೈಸಿದ್ದಾರೆ. ಖರ್ಗೆಗೆ ಒಳ್ಳೆಯದಾಗಲಿ ಎಂದು ಸಿದ್ದರಾಮಯ್ಯ ದೂರವಾಣಿ ಮೂಲಕ ಹಾರೈಸಿದ್ದು, ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜುನ ಖರ್ಗೆ ಸಹ ಧನ್ಯವಾದ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಮತದಾನ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಮೊದಲ ಮತದಾರರಾಗಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಹಕ್ಕು ಚಲಾಯಿಸಿದರು. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತದಾನ ಮಾಡಿದರು. ಕೆಲ ಸಮಯದ ಬಳಿಕ ಸಿದ್ದರಾಮಯ್ಯ ಆಗಮಿಸಿ ಮತದಾನ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಐದತ್ತು ನಿಮಿಷ ಚರ್ಚಿಸಿ ಕೆಪಿಸಿಸಿ ಕಚೇರಿಯಿಂದ ತೆರಳಿದರು.
ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ಹಿಂತಿರುಗಿದ ಸಿದ್ದರಾಮಯ್ಯ ಮತದಾನದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಕೆಪಿಸಿಸಿ ಕಚೇರಿಗೆ ವಾಪಸ್ ಆದರು. ಆದರೆ ಅಷ್ಟರಲ್ಲಾಗಲೇ ಮಲ್ಲಿಕಾರ್ಜುನ ಖರ್ಗೆ ಅಲ್ಲಿಂದ ತೆರಳಿದ್ದರು. ಕೆಪಿಸಿಸಿ ಕಚೇರಿಗೆ ಆಗಮಿಸಿದ ತಕ್ಷಣ ಅಲ್ಲಿ ಖರ್ಗೆ ಅವರು ಇಲ್ಲದ ಮಾಹಿತಿ ಪಡೆದ ಸಿದ್ದರಾಮಯ್ಯ ರಸ್ತೆಯಲ್ಲೇ ನಿಂತು ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಮಾತುಕತೆ ವೇಳೆ, ಹೊರಟು ಹೋಗಿದ್ದೀರಿ. ನಾನು ಈಗ ಕೆಪಿಸಿಸಿ ಕಚೇರಿಗೆ ಬಂದೆ, ಹೊರಟಿದ್ದೀರಾ ಎಂದರು. ಐದು ಗಂಟೆಗೆ ಪ್ಲೈಟ್ ಇದೆ ಎಂದ ಖರ್ಗೆ, ಇದಕ್ಕಾಗಿ ಕೊಂಚ ಬೇಗ ಹೊರಟಿದ್ದಾಗಿ ತಿಳಿಸಿದರು.
ಆಗ ಖರ್ಗೆ ಮಾತು ಕೇಳಿಸಿಕೊಂಡು, ಸಿದ್ದರಾಮಯ್ಯ ನಿಮಗೆ ಒಳ್ಳೆಯದಾಗಲಿ ಎಂದರು. ಇದಕ್ಕೆ ಪ್ರತಿಯಾಗಿ ಖರ್ಗೆ ಧನ್ಯವಾದ ಸಲ್ಲಿಸಿದರು. ಮಾಹಿತಿ ಕೊರತೆಯಿಂದಾಗಿ ಸಿದ್ದರಾಮಯ್ಯ ಕೊಂಚ ವಿಳಂಬವಾಗಿ ಆಗಮಿಸಿದ ಹಿನ್ನೆಲೆ ಅನಿವಾರ್ಯವಾಗಿ ದೂರವಾಣಿ ಮೂಲಕ ಶುಭಾಶಯ ಸಲ್ಲಿಸುವ ಸಂದರ್ಭ ಎದುರಾಯಿತು.
ಇದನ್ನೂ ಓದಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಚೆನ್ನಾಗಿ ನಡೆದಿದೆ: ಡಿ ಕೆ ಶಿವಕುಮಾರ್