ಬೆಂಗಳೂರು : ಬಿಬಿಎಂಪಿಯ ಸ್ವಚ್ಛ ಸರ್ವೇಕ್ಷಣಾ ಅಭಿಯಾನ-2021ಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಬೆಂಗಳೂರಿನ ವಿದ್ಯಾರ್ಥಿಗಳು ಸಾಥ್ ನೀಡಿದ್ರು. ಎಮ್‌ಜಿ ರಸ್ತೆಯ ಉದ್ಯಾನವನದಿಂದ 'ಕ್ಲೆನ್ಲೀನೆಸ್ ಫಾರ್ ಪೀಸ್' ಜಾಥಾ ನಡೆಸಲಾಯಿತು.
ಮಹಾತ್ಮಾ ಗಾಂಧೀಜಿ ಉದ್ಯಾನವನದಿಂದ ವಿಶ್ವೇಶ್ವರಯ್ಯ ಮ್ಯೂಸಿಯಂ, ಮಲ್ಯ ಆಸ್ಪತ್ರೆ ಮಾರ್ಗವಾಗಿ ಪಾಲಿಕೆ ಕೇಂದ್ರ ಕಚೇರಿ ಮೂಲಕ ಟೌನ್ಹಾಲ್ಗೆ ತಲುಪಿ ಜಾಥಾ ಮುಕ್ತಾಯವಾಯಿತು. ಜಾಥಾ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಬಿಬಿಎಂಪಿ ಜಿಲ್ಲಾ ಸಂಸ್ಥೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯ ಮಾತನಾಡಿ, ಬಿಬಿಎಂಪಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸ್ವಚ್ಛ ಸರ್ವೇಕ್ಷಣಾ ಅಭಿಯಾದ ಅಂಗವಾಗಿ ಸ್ವಚ್ಛತೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಇಂದು ಶಾಂತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಹಾತ್ಮ ಗಾಂಧೀಜಿಯವರ ಜೀವನದ ಮುಖ್ಯವಾದ ಅಂಶ ಸ್ವಚ್ಛತೆಯಾಗಿತ್ತು. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಗರದಲ್ಲಿ 60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರೆಲ್ಲರಲ್ಲೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಅವರ ಜೀವನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಹಾಗೆ ಮಾಡುವುದು ಸ್ಕೌಟ್ಸ್ ಮತ್ತು ಗೈಡ್ಸ್ನ ಧ್ಯೇಯವಾಗಿದೆ ಎಂದರು.
ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಶಯದಂತೆ ಎಲ್ಲರೂ ಶಾಂತಿ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಅದರಂತೆ ಎಲ್ಲರೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ತಮ್ಮ ಸುತ್ತಮತ್ತಲಿನ ಪ್ರದೇಶ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.
ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಅಧಿಕಾರಿಗಳ ಜೊತೆ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಾಗ ಸ್ವಚ್ಛ ಸುಂದರ ನಗರವನ್ನಾಗಿ ಮಾಡಬಹುದು ಎಂದರು.
ನಗರ ಸ್ವಚ್ಛವಾಗಿರಬೇಕಾದರೆ ಎಲ್ಲರೂ ಸಮರ್ಪಕವಾಗಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ಬೇರ್ಪಡಿಸಿ ಕೊಡಬೇಕು. ಒಮ್ಮೆ ಬಳಸುವ ಪ್ಲಾಸ್ಟಿಕ್‌ನ ಸಂಪೂರ್ಣ ತ್ಯಜಿಸಬೇಕು. ಸ್ವಚ್ಛ ಬೆಂಗಳೂರಿಗಾಗಿ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕು.
ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಂಡು ನಗರದ ಪರ ಉತ್ತಮ ಪ್ರತಿಕ್ರಿಯೆಗಳನ್ನು ನೀಡಿದಾಗ ಬೆಂಗಳೂರಿಗೆ ಉತ್ತಮ ಅಂಕ ಸಿಗಲಿದೆ ಎಂದರು.
ಈ ಬಾರಿಯ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ರ್ಯಾಂಕಿಂಗ್ನಲ್ಲಿ ಉತ್ತಮ ಅಂಕ ಗಳಿಸಲು ಬಿಬಿಎಂಪಿ ಎಲ್ಲಾ ನಿಟ್ಟಿನ ಪ್ರಯತ್ನ ನಡೆಸುತ್ತಿದೆ.