ಬೆಂಗಳೂರು: ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ವಿಕಾಸಸೌಧದಲ್ಲಿ ಸೋಮವಾರ ಸಂಜೆ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೊರ ರಾಜ್ಯಗಳಲ್ಲಿ ಸಿಲುಕಿರುವ ರಾಜ್ಯದ ಜನರನ್ನು ವಾಪಸ್ ಕರೆತರಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಗೆ 1 ಕೋಟಿ ರೂಪಾಯಿ ಚೆಕ್ ನೀಡಲು ಮುಂದಾದಾಗ, ಸವದಿ ಅವರು ಚೆಕ್ ಸ್ವೀಕರಿಸದೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ಹೇಳಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಚೆಕ್ ಸ್ವೀಕಾರ ಮಾಡಲು ಸಚಿವ ಲಕ್ಷ್ಮಣ ಸವದಿ ಅವರು ಒಪ್ಪಿಲ್ಲ. ಬದಲಿಗೆ ಚೆಕ್ ಅನ್ನು ಸಿಎಂ ಪರಿಹಾರ ನಿಧಿಗೆ ನೀಡಿ ಅಂತ ಸಲಹೆ ನೀಡಿದ್ದಾರೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಸಚಿವ ಅಶೋಕ್ ನಮ್ಮ ಚೆಕ್ ನಕಲಿ ಎಂದು ಆರೋಪ ಮಾಡಿದ್ದಾರೆ. ನಮ್ಮ ಪಕ್ಷ ಹಾಗೂ ನಮ್ಮ ಮುಖಂಡರ ಹಿನ್ನೆಲೆ ನೋಡಿ ಅವರು ಮಾತನಾಡಬೇಕು. ಚೆಕ್ ಮೇಲೆ ನನ್ನ ಸಹಿ ಇಲ್ಲ. ದಿನೇಶ್ ಗುಂಡುರಾವ್ ಸಹಿ ಇದೆ. ಅದು ನಮ್ಮ ಪಕ್ಷದ ವಿಚಾರ, ಆದರೆ ಚೆಕ್ ಅನ್ನೇ ನಕಲಿ ಅನ್ನೋದು ಸರಿಯೇ? ಎಂದು ಪ್ರಶ್ನಿಸಿದರು.
ಇನ್ನು ಕೊಡುವುದೇ ಆದರೆ 100 ಕೋಟಿ ರೂ ಕೊಡಲಿ ಎಂಬ ಅಶೋಕ್ ಅವರಿಗೆ ಸವಾಲು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಶೋಕ್ ನಮಗೆ ಬೆಲೆ ಕಟ್ಟುತ್ತಿದ್ದಾರೆ. ಆದರೆ ನಾವು ಹಾಗೆ ಬೆಲೆ ಕಟ್ಟಲ್ಲ. ಇಡೀ ಕಾಂಗ್ರೆಸ್ ಸರ್ಕಾರದ ಜೊತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಕಾಂಗ್ರೆಸ್ ನೀಡಿದ್ದ ಚೆಕ್ ಬೇಡ ಅಂದಿದ್ದೆವು. ನೀವು ಕೊಡುವುದಾದರೆ ಸಿಎಂ ಫಂಡ್ಗೆ ನೀಡಿ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ. ಅವರು ಕೊಟ್ಟರೆ 150 ಕೋಟಿ ಕೊಟ್ಟು ಸರ್ಕಾರಕ್ಕೆ ಸಹಕರಿಸಲಿ. ಒಂದು ಕೋಟಿ ರೂ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ಡಿಕೆಶಿ ವ್ಯಕ್ತಿತ್ವಕ್ಕೆ ಸರಿ ಹೊಂದಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಸವದಿ ವ್ಯಂಗ್ಯವಾಡಿದರು.