ಬೆಂಗಳೂರು: ಒಲ್ಲದ ಮನಸ್ಸಿನಿಂದ ಬೆಳಗಾವಿ ಲೋಕಸಭೆ ಉಪಚುನಾವಣೆ ಕಣಕ್ಕಿಳಿದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಭರ್ಜರಿ ಪೈಪೋಟಿಗೆ ಕಾಂಗ್ರೆಸ್ ನಾಯಕರೇ ಹೌಹಾರಿದ್ದಾರೆ.
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಿಂದೇಟು ಹಾಕಿ ಕೊನೆಗೂ ರಾಜ್ಯ ನಾಯಕರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿದ್ದ ಸತೀಶ್ ಪರ ಜನ ನೀಡಿದ ಬೆಂಬಲ ಕಾಂಗ್ರೆಸ್ ನಾಯಕರಲ್ಲೇ ಅಚ್ಚರಿ ತರಿಸಿದೆ. ಅಲ್ಲದೇ ಕಡೆಯ ಕ್ಷಣದವರೆಗೂ ಗೆಲುವು ಹಗ್ಗದ ಮೇಲಿನ ನಡಿಗೆಯಂತೆ ತೀವ್ರ ಪೈಪೋಟಿ ನೀಡಿದ ಸತೀಶ್ ಬಗ್ಗೆ ಪಕ್ಷದ ಎಲ್ಲಾ ನಾಯಕರೂ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ಬೆಳಗಾವಿ ಇತಿಹಾಸದಲ್ಲೇ ಇಂತದ್ದೊಂದು ಸ್ಪರ್ಧೆಯನ್ನು ಕಾಂಗ್ರೆಸ್ ಒಡ್ಡಿರಲಿಲ್ಲ ಎಂದು ಬಣ್ಣಿಸಿದ್ದಾರೆ.
ಅಂಗಡಿಯವರ ನಿಧನದ ಅನುಕಂಪದ ಲಾಭ ಗಳಿಸಲು ಅವರ ಪತ್ನಿ ಮಂಗಳಾ ಅಂಗಡಿಗೆ ಟಿಕೆಟ್ ನೀಡಿದ್ದ ಬಿಜೆಪಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಕೇವಲ ಎರಡು ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ತೆಕ್ಕೆಯಲ್ಲಿದ್ದರೆ, ಉಳಿದ 6 ಬಿಜೆಪಿ ಶಾಸಕರಿದ್ದಾರೆ. ಹಿಂದೆ ಸುರೇಶ್ ಅಂಗಡಿ 4 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿದ್ದ ಹಿನ್ನೆಲೆ ಈ ಸಾರಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದೇ ಊಹಿಸಲಾಗಿತ್ತು.
ಅದಕ್ಕಾಗಿಯೇ ತಾವು ಕಣಕ್ಕಿಳಿಯುವುದಿಲ್ಲ ಎಂದು ಸತೀಶ್ ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇವರ ಮನವೊಲಿಸಿ ಕಣಕ್ಕಿಳಿಸಿದ್ದರು. ಸ್ಥಳೀಯವಾಗಿ ಸಾಕಷ್ಟು ಪ್ರಭಾವ ಹೊಂದಿರುವ ಸತೀಶ್ ಕಡೆಯ ಸುತ್ತಿನವರೆಗೂ ತೀವ್ರ ಪೈಪೋಟಿ ನೀಡಿದರು.
ಮಾಧ್ಯಮಗಳ ಜತೆ ಮಾತನಾಡಿದ ಸಂದರ್ಭ ಖುದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ನಾವು ಇನ್ನೊಂದಿಷ್ಟು ಪ್ರಯತ್ನ ಮಾಡಿದ್ದರೆ ಗೆಲ್ಲಿಸಬಹುದಿತ್ತು, ಅತ್ಯುತ್ತಮ ಹೋರಾಟವನ್ನು ಸತೀಶ್ ನೀಡಿದ್ದಾರೆ ಎಂದರು. ಡಿ.ಕೆ ಶಿವಕುಮಾರ್ ಸಹ, ನಮ್ಮ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ದೊಡ್ಡ ಹೋರಾಟ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ನಮ್ಮ ಪಕ್ಷದ ನಾಯಕರು ಶಕ್ತಿಶಾಲಿಯಾಗಿ ಹೊರಹೊಮ್ಮಿದ್ದಾರೆ. ಅವರು ಶಾಸಕರಾಗಿದ್ದರೂ ನಾವು ಪಕ್ಷಕ್ಕಾಗಿ ಸ್ಪರ್ಧಿಸಿ ಎಂದು ಮನವಿ ಮಾಡಿಕೊಂಡಿದ್ದೆವು. ಅವರು ಪಕ್ಷದ ತೀರ್ಮಾನಕ್ಕೆ ಒಪ್ಪಿ, ಬಹಳ ಶಕ್ತಿ ತುಂಬಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಕೊನೆಯ ಮೂರು ಸುತ್ತುಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮಂಗಳಾ ಅಂಗಡಿ ಒಟ್ಟು 5 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಒಂದು ಸಂದರ್ಭ 10 ಸಾವಿರ ಮತಗಳ ಅಂತರ ಸಂಪಾದಿಸುವ ಮೂಲಕ ಸೆಡ್ಡುಹೊಡೆದಿದ್ದ ಸತೀಶ್ ಜಾರಕಿಹೊಳಿ ಸೋತು ಗೆದ್ದಿದ್ದಾರೆ. ಪಕ್ಷದ ಚಟುವಟಿಕೆ, ರಾಜ್ಯ ರಾಜಧಾನಿಯ ನಾಯಕರ ಜತೆ ಅಷ್ಟಾಗಿ ಕಾಣಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಎನ್ನುವಂತೆ ಬೆಳಗಾವಿಯಲ್ಲೇ ಇರುತ್ತಿದ್ದ ಸತೀಶ್ ಜಾರಕಿಹೊಳಿ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಜನ ಮನ್ನಣೆ ಗಳಿಸಿದ್ದಾರೆ ಎಂಬುದು ಫಲಿತಾಂಶದಿಂದ ತಿಳಿದುಬರುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಿಚಾರ ಬಂದಾಗ ಅವರನ್ನು ಪಕ್ಷ ಇನ್ನಷ್ಟು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ.