ಬೆಂಗಳೂರು: ಹಾಲಿ ಮತ್ತು ಮಾಜಿ ಸಿಎಂಗಳು ಎದುರು ಬದುರಾದ ಅಪರೂಪದ ಸನ್ನಿವೇಶ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗ ಗೋಚರಿಸಿತು.
ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದ ಅಂಗವಾಗಿ ಬೆಂಗಳೂರಿನ ಕೋಡೆ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಉಭಯ ನಾಯಕರು ತೆರಳಿದ್ದರು. ಮೊದಲು ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾಷಣ ಮುಗಿಸುತ್ತಿದ್ದಂತೆ, ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಥಳಕ್ಕೆ ಆಗಮಿಸಿದರು. ಅಲ್ಲಿಯೇ ಎದುರಾದ ಸಿದ್ದರಾಮಯ್ಯ ಅವರನ್ನ ಸಿಎಂ ಯಡಿಯೂರಪ್ಪ ಕೈ ಮುಗಿದು ಅಭಿನಂದಿಸಿದರು. ಪ್ರತಿಯಾಗಿ ಕೈ ಮುಗಿದ ಸಿದ್ದರಾಮಯ್ಯ ನಂತರ ಕೈ ಹಿಡಿದು ಅಭಿನಂದಿಸಿದರು. ಪರಸ್ಪರ ಕೈ ಕುಲುಕಿದ ಉಭಯ ನಾಯಕರು 2 ನಿಮಿಷ ಮಾತುಕತೆ ನಡೆಸಿದರು. ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ನೇರವಾಗಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಆಗಮಿಸಿದ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಪ್ರತಿಭಟನೆ ಗೆ ಅವಕಾಶ ಸಿಗಬೇಕು. ಸರ್ವಾಧಿಕಾರಿಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ. ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕೆಲಸ. ಹೋರಾಟ ಮಾಡುವ ಹಕ್ಕು ಕಿತ್ತುಕೊಳ್ಳುವ ಕೆಲಸ ಮಾಡಬಾರದು. ರೈತರು ನಮ್ಮ ಬೆನ್ನೆಲುಬು. ಇದಕ್ಕೆ ತಕ್ಕ ಉತ್ತರ ದೇಶದ ಜನ ಕೊಡ್ತಾರೆ. ಪ್ರತಿಭಟನೆ ಹತ್ತಿಕ್ಕುವುದನ್ನ ನಾನು ಖಂಡಿಸುತ್ತೇನೆ ಎಂದರು.
ಓದಿ: ರೈತರ ಟ್ರ್ಯಾಕ್ಟರ್ ಮೆರವಣಿಗೆ: ಸಿಎಂ ನಿವಾಸ, ಕಚೇರಿಗೆ ಪೊಲೀಸ್ ಸರ್ಪಗಾವಲು!
ಸಿಎಂ ಯಡಿಯೂರಪ್ಪ ಮಾತನಾಡಿ, ಯಾವ ಪ್ರಜಾಪ್ರಭುತ್ವದ ಕಗ್ಗೊಲೆ ಕೂಡ ಮಾಡಿಲ್ಲ. ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ. ಟ್ರ್ಯಾಕ್ಟರ್ಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಅದಕ್ಕೆ ಬೇಡ ಅಂತ ಹೇಳಿದ್ದೇವೆ. ಪ್ರತಿಭಟನೆ ಮಾಡುತ್ತಿರುವವರು ಯಾವ ಕಾರಣಕ್ಕೆ ಮಾಡ್ತಿದ್ದೀವಿ, ಏನೂ ಅಂತ ಹೇಳುತ್ತಿಲ್ಲ. ಕೇವಲ ಜನರ ದಾರಿ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಅಷ್ಟೇ. ಯಾವತ್ತೂ ಕೂಡ ನನ್ನ ಮನೆ ಬಾಗಿಲು ತೆರೆದಿರುತ್ತದೆ. ಯಾವಾಗ ಬೇಕಾದರೂ ರೈತ ಮುಖಂಡರು ಬಂದು ಚರ್ಚೆ ಮಾಡಬಹುದು ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಸಮಾರಂಭದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಅವರ ಗುಣಗಾನ ಮಾಡಿದರು. ಆನಂದರಾವ್ ವೃತ್ತ ಮೇಲುರಸ್ತೆ ಸಂಗೊಳ್ಳಿರಾಯಣ್ಣ ನಾಮಕರಣ ಮಾಡಿದ ಸಿಎಂ ಅವರನ್ನು ಕನ್ನಡಪರ ಹೋರಾಟಗಾರರು ಇದೇ ಸಂದರ್ಭ ಅಭಿನಂದಿಸಿದರು.