ಬೆಂಗಳೂರು: ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಆರೋಪದಡಿ ಸ್ಯಾಂಡಲ್ವುಡ್ ನಟ, ನಿರ್ಮಾಪಕ ವೀರೇಂದ್ರ ಬಾಬುನನ್ನು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
2011ರಲ್ಲಿ ತೆರೆಕಂಡಿದ್ದ 'ಸ್ವಯಂಕೃಷಿ' ಚಿತ್ರದ ಮೂಲಕ ನಿರ್ಮಾಪಕ, ನಿರ್ದೇಶಕ ಹಾಗೂ ನಟನಾಗಿ ವೀರೇಂದ್ರಬಾಬು ಗುರುತಿಸಿಕೊಂಡಿದ್ದ. ಅಲ್ಲದೇ, 'ಸ್ವಯಂಕೃಷಿ' ಹೆಸರಿನ ಸಂಸ್ಥೆ ಹುಟ್ಟು ಹಾಕಿ ಸಾವಿರಾರು ಜನರಿಗೆ ವಂಚಿಸಿದ ಆರೋಪ ಹಿನ್ನೆಲೆ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಧಾರವಾಡ ಮೂಲದ ಬಸವರಾಜ್ ಘೋಷಾಲ್ ಎಂಬುವರಿಗೆ 1.88 ಕೋಟಿ ರೂಪಾಯಿ ವಂಚನೆ ಸಂಬಂಧ ನೀಡಿದ ದೂರಿನ ಮೇರೆಗೆ ವೀರೇಂದ್ರ ಬಾಬುನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರ ಜನಹಿತ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ಪಡೆ ಎಂಬ ಸಂಘಟನೆಯನ್ನೂ ಸ್ಥಾಪಿಸಿದ್ದ. ಸಂಘಟನೆಯಲ್ಲಿ ಸದಸ್ಯ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ.
ಜೊತೆಗೆ ಎಂಪಿ ಹಾಗೂ ಎಂಎಲ್ಎ ಚುನಾವಣೆಗಳಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡುತ್ತಿದ್ದ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಇಷ್ಟೇ ಅಲ್ಲ, ಬೇರೆ - ಬೇರೆ ಅವರಿಂದ ಪಡೆದ ಹಣದಲ್ಲಿ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್ಲೈನ್ ಶಿಕ್ಷಣ ನೀಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದ. ಈ ಕುರಿತ ಏಳು ಜನರು ವಿರುದ್ಧ ದೂರು ಸಲ್ಲಿಕೆಯಾಗಿತ್ತು. ಇದರ ಮೇರೆಗೆ ಪ್ರಮುಖ ಆರೋಪಿ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಅನುಮತಿಯಿಲ್ಲದೇ ಫೋಟೋ, ವಿಡಿಯೋ ತೆಗೆಯುವ ಹಾಗಿಲ್ಲ