ಬೆಂಗಳೂರು: ನೀವು ಎಷ್ಟೇ ಹೋರಾಟ ಮಾಡಿದರೂ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವದನ್ನು ತಡೆಯಲು ಸಾಧ್ಯವಿಲ್ಲ. ಮುಂದಿನ ತಿಂಗಳು ಹೆಸರು ಇಡುತ್ತೇವೆ ಏನ್ ಹೋರಾಟ ಮಾಡ್ತೀರೋ ಮಾಡಿಕೊಳ್ಳಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಸವಾಲೆಸೆದಿದ್ದಾರೆ.
ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ವಿಶ್ವನಾಥ್, ಕುಮಾರಸ್ವಾಮಿಯವರು ವೀರ ಸ್ವಾತಂತ್ರ್ಯ ಸೇನಾನಿಗೆ ಅವಮಾನ ಮಾಡುತ್ತಿದ್ದಾರೆ ನಿಮ್ಮ ಮನೆಯವರದ್ದೇನಾದರೂ ಹೆಸರಡಬೇಕು ಅಂದರೆ ಹೇಳಿ ಮುಂದೆ ಅವರ ಹೆಸರನ್ನೂ ಇಡುತ್ತೇವೆ, ಮಣ್ಣಿನ ಮಕ್ಕಳ ಮೇಲೆ ನಮಗೆ ಗೌರವ ಇದೆ ಎಂದು ಟಾಂಗ್ ನೀಡಿದರು.
ಕುಮಾರಸ್ವಾಮಿಯವರಿಗೆ ಮೊದಲಿಂದಲೂ ಹಿಟ್ ಆಂಡ್ ರನ್ ರೂಢಿಯಾಗಿದೆ. ಕೊರೊನಾ ವಿಚಾರದಲ್ಲಿ ಬರೀ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದೀರಿ, ಸರ್ಕಾರಕ್ಕೆ ಎಲ್ಲಿ ಸಹಕಾರ ಕೊಟ್ಟಿದ್ದೀರಿ? ಕೊರೊನಾ ಭಯದಿಂದ ಕುಮಾರಸ್ವಾಮಿ ಹೊರಗೆ ಬಂದೇ ಇಲ್ಲ, ಆದರೆ ನಮ್ಮ ಇಡೀ ಸರ್ಕಾರ, ಮಂತ್ರಿ ಮಂಡಲ ಕೊರೊನಾ ವಿರುದ್ಧ ಹೋರಾಟಕ್ಕೆ ನಿಂತಿದೆ ಎಂದ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್ ಸ್ಥಾಪನೆ ಮಾಡಿದವರು ಎ.ಒ ಹ್ಯೂಮ್ ಎನ್ನುವ ಹೊರ ದೇಶದ ವ್ಯಕ್ತಿ. ಹೀಗಾಗಿ ಕಾಂಗ್ರೆಸ್ ಇನ್ನೂ ಹೊರ ದೇಶದವರ ದಾಸ್ಯದಲ್ಲೇ ಇದೆ. ನಾವು ಹಿಂದೆ ಇಂದಿರಾ ಕ್ಯಾಂಟೀನ್ ಅಂತ ಹೆಸರಿಟ್ಟಾಗ ವಿರೋಧ ಮಾಡಿದ್ದೆವಾ? ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಸೇನಾನಿಯ ಹೆಸರಿಡಬಾರದೇ?. ಕಾರ್ಯಕ್ರಮ ತಾತ್ಕಾಲಿಕವಾಗಿ ಮುಂದೆ ಹೋಗಿದೆ ಅಷ್ಟೆ , ಆದರೆ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟೇ ತೀರುತ್ತೇವೆ. ಲಾಕ್ ಡೌನ್ ಇರೋ ಕಾರಣ, ಕಾರ್ಯಕ್ರಮಕ್ಕೆ ಜಾಸ್ತಿ ಜನ ಸೇರಬಹುದು ಎಂಬ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲಾಗಿದೆ. ಈಗಾಗಲೇ ಬಿಬಿಎಂಪಿಯಲ್ಲಿ ಇದು ಅನುಮೋದನೆಗೊಂಡಿದೆ ಎಂದು ಎಸ್ ಆರ್ ವಿಶ್ವನಾಥ್ ಸ್ಪಷ್ಟಪಡಿಸಿದರು.