ಬೆಂಗಳೂರು : ಕೊರೊನಾ ಸೋಂಕು ಪತ್ತೆಗೆ ಪ್ರಸ್ತುತ ನಡೆಸುತ್ತಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಶೇ. 100ರಷ್ಟು ನಿಖರತೆ ಇಲ್ಲ. ಕೊರೊನಾ ಸೋಂಕು ಇದ್ದರೂ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಶೇ. 30ರಿಂದ 40ರಷ್ಟು ಮಂದಿಗೆ ನೆಗೆಟಿವ್ ಬರುವ ಸಾಧ್ಯತೆಯಿದೆ. ಹೀಗಾಗಿ ಕೊರೊನಾ ಸೋಂಕು ಲಕ್ಷಣ ಇರುವವರಿಗೆ ಎದೆಭಾಗದ ಸಿಟಿ ಸ್ಕ್ಯಾನ್ (ಸಿಟಿ-ಥೊರಾಕ್ಸ್) ನಡೆಸಿ ಕೊರೊನಾ ಪತ್ತೆ ಮಾಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
![RTPSR test is not 100 percent accurate, RTPSR test is not accurate, RTPSR test, RTPSR test news, ಆರ್ಟಿಪಿಎಸ್ಆರ್ ಪರೀಕ್ಷೆ ಶೇ.100ರಷ್ಟು ನಿಖರತೆ ಇಲ್ಲ, ಆರ್ಟಿಪಿಎಸ್ಆರ್ ಪರೀಕ್ಷೆ ನಿಖರತೆ ಇಲ್ಲ, ಆರ್ಟಿಪಿಎಸ್ಆರ್ ಪರೀಕ್ಷೆ, ಆರ್ಟಿಪಿಎಸ್ಆರ್ ಪರೀಕ್ಷೆ ಸುದ್ದಿ,](https://etvbharatimages.akamaized.net/etvbharat/prod-images/kn-bng-05-health-department-order-script-7208083_16102020232012_1610f_1602870612_678.jpg)
ವಿಶ್ವಾದ್ಯಂತ ಪ್ರಸ್ತುತ ಗೋಲ್ಡ್ ಸ್ಟಾಂಡರ್ಡ್ ಎಂದು ಪರಿಗಣಿಸುತ್ತಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಶೇ. 60ರಿಂದ 70ರಷ್ಟು ಮಾತ್ರ ಸೆನ್ಸಿಟಿವಿಟಿ (ನಿಜವಾದ ಪಾಸಿಟಿವ್ ಪ್ರಕರಣಗಳ ಪತ್ತೆ ಸಾಮರ್ಥ್ಯ) ಇರುತ್ತದೆ. ಐಸಿಎಂಆರ್ ಪ್ರಕಾರವೂ ಶೇ. 50.76ರಿಂದ ಶೇ. 84ರವರೆಗೆ ಮಾತ್ರ ಸೆನ್ಸಿಟಿವಿಟಿ ಇರುತ್ತದೆ. ಇದರಿಂದ ಪಾಸಿಟಿವ್ ಪ್ರಕರಣಗಳಿಗೂ ನೆಗೆಟಿವ್ ಎಂದು ವರದಿ ಬರಬಹುದು. ಹೀಗೆ ನೆಗೆಟಿವ್ ವರದಿ ಬಂದವರಿಗೆ ಕೊರೊನಾ ಸೋಂಕು ಲಕ್ಷಣ (ಕೆಮ್ಮು, ಜ್ವರ, ನೆಗಡಿ, ವಿಷಮ ಶೀತ ಜ್ವರ) ಇದ್ದರೆ ಅವರ ಎದೆ ಭಾಗದ ಸಿಟಿ ಸ್ಕ್ಯಾನ್ ನಡೆಸಿ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿದೆಯೇ ಎಂದು ಪತ್ತೆ ಹೆಚ್ಚಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.
ಒಂದು ವೇಳೆ ಶ್ವಾಸಕೋಶದಲ್ಲಿ ಸೋಂಕು ಪತ್ತೆಯಾಗಿ ರಕ್ತ ಪರೀಕ್ಷೆಯಲ್ಲಿ ಬಯೋಮಾರ್ಕರ್‌ಗಳಲ್ಲೂ ಸೋಂಕು ಲಕ್ಷಣಗಳು ಪತ್ತೆಯಾದರೆ ಅವರನ್ನು ಕೊರೊನಾ ಸೋಂಕಿತ ಎಂದೇ ಭಾವಿಸಿ ಚಿಕಿತ್ಸೆ ನೀಡಿ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶದಲ್ಲಿ ತಿಳಿಸಿದ್ದಾರೆ.
![RTPSR test is not 100 percent accurate, RTPSR test is not accurate, RTPSR test, RTPSR test news, ಆರ್ಟಿಪಿಎಸ್ಆರ್ ಪರೀಕ್ಷೆ ಶೇ.100ರಷ್ಟು ನಿಖರತೆ ಇಲ್ಲ, ಆರ್ಟಿಪಿಎಸ್ಆರ್ ಪರೀಕ್ಷೆ ನಿಖರತೆ ಇಲ್ಲ, ಆರ್ಟಿಪಿಎಸ್ಆರ್ ಪರೀಕ್ಷೆ, ಆರ್ಟಿಪಿಎಸ್ಆರ್ ಪರೀಕ್ಷೆ ಸುದ್ದಿ,](https://etvbharatimages.akamaized.net/etvbharat/prod-images/kn-bng-05-health-department-order-script-7208083_16102020232012_1610f_1602870612_840.jpg)
ಸಿಟಿ ಸ್ಕ್ಯಾನ್‌ನಲ್ಲಿ ಹೆಚ್ಚು ಸೆನ್ಸಿಟಿವಿಟಿ ಇರುತ್ತದೆ. ಶೇ. 98ರಷ್ಟು ಪ್ರಕರಣದವರೆಗೆ ನಿಖರವಾಗಿ ಸೋಂಕು ಪತ್ತೆ ಮಾಡಬಹುದು. ಪ್ರಸ್ತುತ ದೇಶ ಹಾಗೂ ರಾಜ್ಯದಲ್ಲಿ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಾದಂತೆ ಸೋಂಕೂ ಹೆಚ್ಚಾಗುತ್ತಿದೆ. ಇದೇ ವೇಳೆ ಸುಳ್ಳು ನೆಗೆಟಿವ್ ವರದಿಗಳೂ ಹೆಚ್ಚಾಗುತ್ತಿವೆ. ಭವಿಷ್ಯದಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿ ಸೋಂಕು ಉಳ್ಳವರೂ ನೆಗೆಟಿವ್ ಎಂದು ನಿರ್ಲಕ್ಷ್ಯ ವಹಿಸಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕೊರೊನಾ ಮಾದರಿ ಕಾಯಿಲೆ ಲಕ್ಷಣಗಳು (ಕೋವಿಡ್ ಲೈಕ್ ಸಿಂಡ್ರೋಮ್) ಹೊಂದಿರುವವರಿಗೆ ಸಿಟಿ ಸ್ಕ್ಯಾನ್ ಮಾಡಿಸಬಹುದು. ಈ ಮೂಲಕ ಸೋಂಕು ಹೆಚ್ಚಾಗುವುದನ್ನು ನಿಯಂತ್ರಿಸಿ, ಸೂಕ್ತ ವೇಳೆಗೆ ಚಿಕಿತ್ಸೆ ನೀಡಬಹುದು. ಇದರಿಂದ ಸಾವಿನ ಪ್ರಮಾಣವನ್ನೂ ಕಡಿಮೆ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.