ಬೆಂಗಳೂರು: ಸಮುದಾಯಕ್ಕೆ ವ್ಯಾಪಿಸಿರುವ ಮಹಾಮಾರಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ವಾರಿಯರ್ಸ್ಗಳನ್ನು ಕಾಡುತ್ತಿದೆ. ಇದರಿಂದಾಗಿ ಪ್ರಾಯೋಗಿಕವಾಗಿ ಆರೋಗ್ಯ ಸಿಬ್ಬಂದಿ ಬದಲು ರೊಬೊಟ್ ಬಳಸಲು ತೀರ್ಮಾನಿಸಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಆರಂಭದ ದಿನಗಳಲ್ಲಿ ಅಂದರೆ ಏಪ್ರಿಲ್ ತಿಂಗಳಲ್ಲಿ ಪ್ರಾಯೋಗಿಕವಾಗಿ ರೋಗಿಗಳಿಗೆ ಔಷಧಿ ವಿತರಿಸಲು ರೊಬೊಟ್ ಬಳಸಲಾಯಿತು. ನಂತರ ಅದರ ಬಳಕೆಯನ್ನು ಕಡಿಮೆ ಮಾಡಿ, ನಿಲ್ಲಿಸಲಾಗಿದೆ. ಇನ್ನು ಪೋರ್ಟಿಸ್ ಆಸ್ಪತ್ರೆಯಲ್ಲಿ ರೊಬೊಟ್ ಬಳಸಲಾಗುತ್ತಿದೆ. ಇಂತ ಪ್ರಯತ್ನ ಪ್ರಗತಿಯಲ್ಲಿರುವ ರಾಜ್ಯದ ಏಕೈಕ ಆಸ್ಪತ್ರೆ ಇದಾಗಿದೆ.
ರೊಬೊಟ್ ರೋಗಿಗಳ ಸೇವೆಯಲ್ಲಿ ತೊಡಗಿಲ್ಲ. ಬದಲಾಗಿ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಇರಿಸಲಾಗಿದ್ದು, ಒಳ ಬರುವ ಜನರು, ರೋಗಿಗಳ ದೇಹದ ತಾಪಮಾನ ತಪಾಸಣೆಗೆ ಬಳಕೆಯಾಗುತ್ತಿದೆ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ರೋಗಿಗಳಿಗೆ ಏಕಕಾಲಕ್ಕೆ ಚಿಕಿತ್ಸೆ ನೀಡುವಷ್ಟು ಸಾಮರ್ಥದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಎ ಸಿಮ್ಟಮ್ಯಾಟಿಕ್ ಕೊರೊನಾ ರೋಗಿಗಳನ್ನು ಇಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ.
ಸದ್ಯ ಸಾವಿರದಷ್ಟು ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ ಹೊಂದಿರುವ ಕೇಂದ್ರ ಹಂತ ಹಂತವಾಗಿ ವ್ಯವಸ್ಥೆಯ ಉನ್ನತೀಕರಣ ಪಡೆಯಲಿದೆ. ಸದ್ಯ ಇಲ್ಲಿ ರೊಬೊಟ್ ಬಳಸಲು ಸರ್ಕಾರ ನಿರ್ಧರಿಸಿ, ಸಿದ್ಧತೆ ಕೂಡ ಮಾಡಿಕೊಂಡಿದೆ. ವೈದ್ಯರ ತಂಡ ಇದನ್ನು ಪ್ರಾಯೋಗಿಕವಾಗಿ ಬಳಸಲು ನಿರ್ಧರಿಸಿದ್ದು, ಘೋಷಣೆ ಕೂಡ ಮಾಡಿದ್ದಾರೆ.
ಇದು ರೋಗಿಗಳ ತಪಾಸಣೆಗೆ ಮುಂದಾಗುವುದಿಲ್ಲ. ಮಾಹಿತಿ ಸಂಗ್ರಹಿಸಿ, ತಜ್ಞ ವೈದ್ಯರಿಗೆ ವಿವರ ರವಾನಿಸುವ ಕಾರ್ಯವನ್ನು ಆನ್ಲೈನ್ ಮೂಲಕ ಮಾಡಲಿದೆ.
ಕಾರ್ಯ ನಿರ್ವಹಣೆ ಹೇಗೆ? ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ ಕೊರೊನಾ ನಿಯಂತ್ರಣ ಪಡೆ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಈ ಬಗ್ಗೆ ವಿವರ ನೀಡಿದ್ದು, ರೊಬೊಟ್ ಚಲಿಸಲು ಬ್ಯಾಟರಿ ಚಾಲಿತ ಹಾಗೂ ನಿಂತು ಕೊಂಡು ಚಲಿಸಬಹುದಾದ ಚಿಕ್ಕ ವಾಹನ ರೂಪದ 'ಸೆಗ್ವೇ' ಯನ್ನು ಬಳಸುತ್ತೇವೆ. ಚಕ್ರಗಳ ಚಾಲಿತ ಈ ಯಂತ್ರ ಮೇಲ್ಭಾಗದಲ್ಲಿ ಕ್ಯಾಮೆರಾ, ಮೈಕ್ ಇರುವ ಎಲ್ಇಡಿ ಸ್ಕ್ರೀನ್ ಹೊಂದಿದೆ. ಸೋಂಕಿತರು ಇರುವ ಕೋಣೆಯಲ್ಲಿ ಸಂಚರಿಸುವ ರೊಬೊಟ್, ಸೋಂಕಿತರ ಬೆಡ್ ಬಳಿ ತೆರಳುತ್ತದೆ. ವಿಡಿಯೊ ಕಾನ್ಫರೆನ್ಸ್ ರೀತಿಯಲ್ಲಿ ವೈದ್ಯರು ಮತ್ತು ಸೋಂಕಿತರು ಸ್ಕ್ರೀನ್ ಮೇಲೆ ಕಾಣಿಸುತ್ತಾರೆ. ಈ ವೇಳೆ ವೈದ್ಯರು ತಾವು ಇರುವ ಸ್ಥಳದಿಂದಲೇ ಸೋಂಕಿತರ ಜೊತೆ ಟೆಲಿ ಕನ್ಸಲ್ಟೇಷನ್ ಮಾಡುತ್ತಾರೆ.
ಸೋಂಕಿತನ ಆರೋಗ್ಯ ಸ್ಥಿತಿ, ಬದಲಾವಣೆ, ಆರೋಗ್ಯದಲ್ಲಿಸುಧಾರಣೆ ಕುರಿತು ವೈದ್ಯರು ಮಾಹಿತಿ ಕೇಳುತ್ತಾರೆ. ಸೋಂಕಿತರು ಕೂಡ ವೈದ್ಯರೊಂದಿಗೆ ಮಾತನಾಡುತ್ತಾರೆ. ಸಲಹೆ ಸೂಚನೆಗಳನ್ನೂ ಪಡೆದುಕೊಳ್ಳುತ್ತಾರೆ. ವೈದ್ಯರ ಕೊರತೆಯನ್ನು ನೀಗಿಸುವಲ್ಲಿ ಈ ರೊಬೊಟ್ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ರೊಬೊಟ್ ಬಳಕೆ ಮಾಡಲಾಗಿದೆ.
ಈಗಾಗಲೇ ಬಿಐಇಸಿಗೆ ಒಂದು ರೊಬೊಟ್ ಬಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಪ್ರತಿಯೊಂದು ಕೊಠಡಿಗೂ ಒಂದೊಂದು ರೊಬೊಟ್ ನಿಯೋಜಿಸುವ ಉದ್ದೇಶ ಹೊಂದಿದೆ. ಮಹಾರಾಷ್ಟ್ರದಲ್ಲೂ ರೊಬೊಟ್ ಬಳಕೆ ಇದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಹೊಸ ಐಡಿಯಾವನ್ನು ಮಾಡಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗೆ ಔಷಧಿ, ಊಟ ಮತ್ತು ನೀರು ನೀಡುವುದಕ್ಕೆ ನರ್ಸ್ಗಳ ಬದಲು ರಿಮೋಟ್ ಕಂಟ್ರೋಲ್ ರೊಬೊಟ್ 'ಗೊಲ್ಲಾರ್' ಅನ್ನು ಬಳಸಿಕೊಳ್ಳಲಾಗುತ್ತಿದೆ. ನೇರ ಸಂಪರ್ಕ ಕಡಿತಗೊಳ್ಳುವ ಕಾರಣ ವೈದ್ಯರಿಗೆ ಸೋಂಕಿನ ಭೀತಿ ಗಣನೀಯವಾಗಿ ಕಡಿಮೆಯಾಗಲಿದೆ. ಅಲ್ಲದೆ, ಪದೇ ಪದೆ ಸೋಂಕಿತರ ಬಳಿಗೆ ವೈದ್ಯರು ಹೋಗುವುದು ತಪ್ಪಲಿದೆ. ಸದ್ಯ ಈ ಯಂತ್ರದ ಬಳಕೆ ಸಮರ್ಪಕವಾಗಿ ಬಿಐಇಸಿಯಲ್ಲಾದರೂ ಆಗಲಿ ಎನ್ನುವುದು ಎಲ್ಲರ ಆಶಯವಾಗಿದೆ.