ಬೆಂಗಳೂರು: ಹೆಬ್ಬಗೋಡಿ ಪಟಾಕಿ ಅಂಗಡಿ ಮಾಲೀಕನ ಕಾರು ಅಡ್ಡಗಟ್ಟಿ, ಮಾರಕಾಸ್ತ್ರದಿಂದ ಹಲ್ಲೆ ಮಾಡಿ 20 ಲಕ್ಷ ರೂ. ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಎನ್‌ಜಿಎಐ ಬಡಾವಣೆ ಅಗ್ರಹಾರದ ಅಜಯ್(27), ಲಕ್ಷ್ಮಿ ಲೇಔಟ್ ಗಾರ್ವೇಬಾವಿ ಪಾಳ್ಯದ ನವೀನ್ (23), ಸಂಪಿಗೆ ನಗರ ಕಮ್ಮಸಂದ್ರದ ಯಮನೂರು ನಾಯ್ಕ(35), ಹೆಬ್ಬಗೋಡಿ ಗೌತಮ್(26) ಹಾಗೂ ಸಿಂಗಸಂದ್ರದ ಜೆಬಿನ್(23) ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಪಟಾಕಿ ಅಂಗಡಿ ಮಾಲೀಕ ಚಂದ್ರಶೇಖರ್ ಎಂಬುವವರು ಕಳೆದ ಅ.23 ರಂದು ಮುಂಜಾನೆ ಪಟಾಕಿ ಅಂಗಡಿ ಬಾಗಿಲು ಹಾಕಿಕೊಂಡು ಕಾರಿನಲ್ಲಿ ಪಟಾಕಿ ವ್ಯಾಪಾರ ಮಾಡಿದ್ದ 20 ಲಕ್ಷ ಹಣವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದರು. ಇದನ್ನು ಅಂಗಡಿ ಹಿಂದೆ ನಿಂತು ಗಮನಿಸಿದ ಗೌತಂ ಎಂಬಾತ ತನ್ನ ತಂಡಕ್ಕೆ ತಿಳಿಸಿದ್ದಾನೆ.
ಬೆಂಗಳೂರು-ಹೊಸೂರು ಎನ್ಹೆಚ್ 7 ರಸ್ತೆ ಅತ್ತಿಬೆಲೆ ಟೋಲ್ ಬಾರ್ಡರ್ ಬಳಿ ಇರುವ ಕಾವೇರಮ್ಮ ದೇವಸ್ಥಾನದ ಎದುರುಗಡೆ ಚಂದ್ರಶೇಖರ್ ಒಬ್ಬರೇ ಹೋಗುತ್ತಿರುವಾಗ ಅಜಯ್ ಹಾಗೂ ತಂಡ ಮೋಟಾರ್ ಸೈಕಲ್‌ನಲ್ಲಿ ಕಾರನ್ನು ಅಡ್ಟಗಟ್ಟಿದೆ. ಬಳಿಕ ಲಾಂಗ್‌ನಿಂದ ಕಾರಿನ ಡೋರ್ ತೆಗೆದು ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿ, ಕಾರಿನಿಂದ ಹೊರಗಡೆ ತಳ್ಳಿದ್ದಾರೆ. ನಂತರ ಕಾರಿನಲ್ಲಿದ್ದ 20 ಲಕ್ಷ ಹಣ, ಮೊಬೈಲ್ ಹಾಗೂ ಕಾರಿನ ಕೀ ಕಿತ್ತುಕೊಂಡು ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ಅತ್ತಿಬೆಲೆ ಪೊಲೀಸರು ಬೆಂಗಳೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಎಂ.ಎಲ್, ಪುರುಷೋತ್ತಮ್, ಡಿವೈಎಸ್ಪಿ ಎ.ವಿ ಲಕ್ಷ್ಮೀನಾರಾಯಣ ಮತ್ತು ಅತ್ತಿಬೆಲೆ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು.
ಆರೋಪಿಗಳು ಐಷಾರಾಮಿ ಜೀವನ ನಡೆಸಲು ದರೋಡೆ ಮಾಡಿದ್ದರು. ದರೋಡೆ ಮಾಡಿದ್ದ ಹಣದಿಂದ ಬೇರೆ ಬೇರೆ ಕಡೆ ಲೈವ್ ಬ್ಯಾಂಡ್, ಗ್ಯಾಂಬ್ಲಿಂಗ್ನಲ್ಲಿ 12.75 ಲಕ್ಷ ಖರ್ಚು ಮಾಡಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಇವರ ವಿರುದ್ಧ ಪರಪ್ಪನ ಅಗ್ರಹಾರ ಮತ್ತು ಮಡಿವಾಳ ಠಾಣೆಗಳಲ್ಲಿ ಪ್ರಕರಣಗಳಿವೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ 7 ಲಕ್ಷದ 16 ಸಾವಿರ ರೂ., ಒಂದು ಲಾಂಗ್, ಎರಡು ದ್ವಿಚಕ್ರ ವಾಹನ, ಕಾರಿನ ಕೀ ಹಾಗೂ 5 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಟಾಕಿ ವ್ಯಾಪಾರಿಯನ್ನು ಅಡ್ಡಗಟ್ಟಿ 20 ಲಕ್ಷ ದರೋಡೆ