ಬೆಂಗಳೂರು: ಹಲವು ಸಂಕಷ್ಟದ ನಡುವೆ ಸಿಲಿಕಾನ್ ಸಿಟಿಯ ವಸತಿ ಪ್ರದೇಶದಲ್ಲಿ ಅಪರೂಪದ ಪಕ್ಷಿ, ಪ್ರಾಣಿಗಳು ಪ್ರತ್ಯಕ್ಷವಾಗುತ್ತಿವೆ. ಅದೇ ರೀತಿ ಇಂದು ಒಂದು ಚರ್ಚ್ ಆವರಣದಲ್ಲಿ ಬೃಹತ್ ಗಾತ್ರದ ನೀರು ಕೊಕ್ಕರೆ ಕಂಡು ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
![Rare bird rescued at Bangaluru](https://etvbharatimages.akamaized.net/etvbharat/prod-images/kn-bng-04-bird-rescue-7202707_24042020153500_2404f_1587722700_864.jpg)
ಪಿಲಿಕಾನ್ ಎಂದು ಕರೆಯಲ್ಪಡುವ ಈ ಪಕ್ಷಿ, ಭಾರತೀನಗರ ಪೊಲೀಸ್ ಠಾಣೆಯ ಹಿಂಭಾಗ ಇರುವ ಚರ್ಚ್ ಆವರಣದಲ್ಲಿ ಹಾರಿಕೊಂಡು ಬಂದು ಬಿದ್ದಿತ್ತು. ಇದನ್ನು ಕಂಡ ಚರ್ಚ್ ಫಾದರ್ ಚರ್ಚ್ ಆವರಣದಲ್ಲಿದ್ದ ನೀರಿನ ಕಾರಂಜಿಯ ಸಣ್ಣ ಕೊಳಕ್ಕೆ ಬಿಟ್ಟಿದ್ದಾರೆ. ಬಳಿಕ ವನ್ಯಜೀವಿ ಸಂರಕ್ಷಕ ಮೋಹನ್ ಅವರಿಗೆ ಕರೆ ಮಾಡಿದ್ದು, ಮೋಹನ್ ಅವರು ಆ ಪಕ್ಷಿಯನ್ನು ರಕ್ಷಿಸಿ, ಕೆಂಗೇರಿ ಬಳಿಯ ಪೀಪಲ್ ಫಾರ್ ಅನಿಮಲ್ ಸೆಂಟರ್ ಪುನರ್ವಸತಿ ಕೇಂದ್ರಕ್ಕೆ ನೀಡಿದ್ದಾರೆ.
![Rare bird rescued at Bangaluru](https://etvbharatimages.akamaized.net/etvbharat/prod-images/kn-bng-04-bird-rescue-7202707_24042020153500_2404f_1587722700_267.jpg)
ನೀರು ಕೊಕ್ಕರೆಯ ಕಣ್ಣಿಗೆ ಸಮಸ್ಯೆ ಆಗಿದ್ದು, ಅದನ್ನು ಸೂಕ್ತ ಚಿಕಿತ್ಸೆಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಬೆಳಗ್ಗೆ 10 ಗಂಟೆಗೆ ರಕ್ಷಣೆಗೆ ಕರೆ ಬಂದಿದ್ದು, ರಟ್ಟಿನ ಬಾಕ್ಸ್ ಮೂಲಕ ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ನೀಡಲಾಗಿದೆ ಎಂದರು. ಈಗ ಇಂತಹ ಪಕ್ಷಿ ನಗರದ ದೊಡ್ಡ ದೊಡ್ಡ ಕೆರೆಗಳಲ್ಲಿ ಕಂಡುಬರುತ್ತಿವೆ. ನಿನ್ನೆ ರಾತ್ರಿ ಹಾಗೂ ಬೆಳಗ್ಗೆ ಭಾರೀ ಮಳೆಯಾಗಿದ್ದರಿಂದ ಪಕ್ಕದ ಹಲಸೂರು ಕೆರೆಯಲ್ಲಿ ತ್ಯಾಜ್ಯ ನೀರು ಹೆಚ್ಚಾಗಿ ಹೊರಗೆ ಹಾರಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ..
![Rare bird rescued at Bangaluru](https://etvbharatimages.akamaized.net/etvbharat/prod-images/kn-bng-04-bird-rescue-7202707_24042020153500_2404f_1587722700_364.jpg)