ಬೆಂಗಳೂರು: ನಿಮ್ಮ ಧಮ್, ತಾಕತ್ತನ್ನು ರಸ್ತೆ ಗುಂಡಿ ಮುಚ್ಚುವುದರಲ್ಲಿ ತೋರಿಸಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬೆಂಗಳೂರಿನ ರಸ್ತೆ ಗುಂಡಿಗಳೀಗ ಸಾವಿನ ಗುಂಡಿಗಳಾಗಿವೆ. ಇವುಗಳಿಂದ ಮೇಲಿಂದ ಮೇಲೆ ಸಾವು-ನೋವುಗಳು ಸಂಭವಿಸುತ್ತಿದ್ದರೂ ಸರ್ಕಾರ ಮಾತ್ರ ಕುಂಭಕರ್ಣ ನಿದ್ದೆಯಲ್ಲಿದೆ. ‘ಕಾಮನ್ ಮ್ಯಾನ್’ ಎಂದು ಬೊಗಳೆ ಬಿಡುವ ಬೊಮ್ಮಾಯಿಯವರೇ ಮೊದಲು ಕಾಮನ್ ಮ್ಯಾನ್ ಕಷ್ಟ ಏನೆಂದು ಅರಿತುಕೊಳ್ಳಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವೂ ಟ್ವೀಟ್ ಮಾಡಿ ಸರ್ಕಾರದ ಕಾಲೆಳೆದಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ ಪಡೆಯಬಹುದು. ಜನತೆ ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ. ವೇದಿಕೆ ಮೇಲೆ ದಮ್ಮು ತಾಕತ್ತಿನ ಸವಾಲು ಹಾಕುವ ಬಸವರಾಜ ಬೊಮ್ಮಾಯಿ ಅವರೇ, ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ದಮ್ಮು ತಾಕತ್ತು ತೋರಬೇಕಲ್ಲವೇ? ಸೇ-ಸಿಎಂ ಎಂದು ಟ್ಯಾಗ್ ಮಾಡಿ ಒತ್ತಾಯಿಸಿದೆ.
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಮುಂದಾಗಿರುವ ಸರ್ಕಾರ ಈಗಾಗಲೇ ಹೂಡಿಕೆ ಮಾಡಿದವರ ಕೊಡುತ್ತಿರುವ ಉಡುಗೊರೆ-ರಸ್ತೆ ಗುಂಡಿಗಳು. ಪೀಣ್ಯದಲ್ಲಿರುವ ರಸ್ತೆ ಗುಂಡಿಗಳಿಂದ ವಹಿವಾಟಿಗೆ ತೊಂದರೆಯಾಗುತ್ತಿದೆ. ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ಬಸವರಾಜ ಬೊಮ್ಮಾಯಿ ಅವರೇ, ಇದೇನಾ ತಾವು ಹೂಡಿಕೆದಾರರಿಗೆ ನೀಡುವ ಭರವಸೆ, ಸೌಲಭ್ಯಗಳು? ಎಂದು ಪ್ರಶ್ನಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ನಿಷೇಧವಿದ್ದರೂ ಬೆಂಗಳೂರಿನಾದ್ಯಂತ 5000ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಅನಧಿಕೃತ ಬ್ಯಾನರ್‌ಗಳನ್ನು ಹಾಕಲಾಗಿದೆ. ಬಿಬಿಎಂಪಿ ಆಯುಕ್ತರೇ, ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರೇ, ಇವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲವೇಕೆ? ಬ್ಯಾನರ್‌ಗಳನ್ನು ತೆರವು ಮಾಡಲಿಲ್ಲ ಏಕೆ? ಕಾನೂನು ಬಿಜೆಪಿಗೇ ಬೇರೆ, ಇತರರಿಗೆ ಬೇರೆ ಇದೆಯೇ? ಎಂದು ಕೇಳಿದೆ.
ಕಾನೂನು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳಲು ಮಾತ್ರ ಇರುವುದೇ ಬಸವರಾಜ ಬೊಮ್ಮಾಯಿ ಅವರೇ? ಕಾಂಗ್ರೆಸ್ ಬ್ಯಾನರ್‌ಗಳಿಗೆ ತಾವು ತೋರುವ ವೀರಾವೇಶ ನಿಮ್ಮ ಪಕ್ಷದವರ ಬ್ಯಾನರ್‌ಗಳಿಗೆ ತೋರುತ್ತಿಲ್ಲವೇಕೆ? ಬೆಂಗಳೂರನ್ನು ಹಾಗೂ ಕಾನೂನನ್ನು ಬಿಜೆಪಿ ಪಕ್ಷ ಗುತ್ತಿಗೆ ಪಡೆದಿದೆಯೇ? ಬಿಬಿಎಂಪಿ ಆಯುಕ್ತರೇ, ಕ್ರಮ ಕೈಗೊಂಡು ತಮ್ಮ ನಿಷ್ಪಕ್ಷಪಾತವನ್ನು ನಿರೂಪಿಸಿ ಎಂದು ಸವಾಲು ಹಾಕಿದೆ.
ಇದನ್ನೂ ಓದಿ: ಸರಣಿ ರಜೆ, ಮಳೆ ಬಿಡುವು: ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾದ ಪಾಲಿಕೆ