ಬೆಂಗಳೂರು: ಡಬಲ್ ಇಂಜಿನ್ ಸರ್ಕಾರ ದೇಶದ ಪ್ರತಿ ಆಡಳಿತ ಯಂತ್ರಗಳ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 20ರಂದು ರಾಜ್ಯ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಅಂದು ಮಧ್ಯಾಹ್ನ 3 ಗಂಟೆ ಒಳಗೆ ಎಲ್ಲ ನಾಮಪತ್ರ ಸಲ್ಲಿಕೆgಎ ಅವಕಾಶವಿತ್ತು. ಬಹುತೇಕ ಎಲ್ಲರೂ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಹಲವರ ನಾಮಪತ್ರ ತಾಂತ್ರಿಕ ಕಾರಣಗಳಿಂದ ತಿರಸ್ಕೃತವಾಗಿವೆ. ಆಯೋಗ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಮತ್ತು ಅಧಿಕಾರ ದುರುಪಯೋಗಕ್ಕೆ ಅವಕಾಶ ನೀಡದೆ ಚುನಾವಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಗಡುವು ಮುಕ್ತಾಯದ ನಂತರ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಅಫಿಡವಿಟ್ ಛಾಪಾಕಾಗದವನ್ನು 20ನೇ ತಾರೀಕು 7.30ಕ್ಕೆ ವಿಕಾಸ್ ಕೋಆಪರೇಟಿವ್ ಸೊಸೈಟಿ ಸಹಕಾರ ಸಂಘದಿಂದ ಖರೀದಿ ಮಾಡಿದ್ದಾರೆ. ಇಸ್ಟಾಂಪಿಂಗ್ ಪ್ರಕಾರ ಇಡೀ ರಾಜ್ಯದಲ್ಲಿ ಇದನ್ನು ಸಂಜೆ 5ಗಂಟೆ ಒಳಗಾಗಿ ನೀಡಬೇಕು ಎಂದು ಕಾನೂನಿನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ 7.38 ಗಂಟೆಗೆ ಛಾಪಾಕಾಗದ ನೀಡಲಾಗಿದೆ. ಈ ಛಾಪಾಕಾಗದ ಖರೀದಿ ಮಾಡಿರುವುದೇ ಅಕ್ರಮ ಎಂದು ರಮೇಶ್ಬಾಬು ಆರೋಪಿಸಿದರು.
ಬಹಳ ಆಶ್ಚರ್ಯವೆಂದರೆ, ಏಪ್ರಿಲ್ 20ರಂದು ಖರೀದಿ ಮಾಡಲಾಗಿರುವ ಛಾಪಾಕಾಗದದ ದಾಖಲೆಯನ್ನು ಚುನಾವಣಾ ಆಯೋಗ ತನ್ನ ವೆಬ್ಸೈಟ್ ನಲ್ಲಿ ಏಪ್ರಿಲ್ 19ರಂದೇ ಅಪ್ಲೋಡ್ ಮಾಡಿದೆ. ಇದು ಹೇಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ರಕ್ಷಣೆ ಮಾಡಲು ರಾಜ್ಯ ಚುನಾವಣಾ ಆಯೋಗ, ತಮ್ಮ ನೀತಿ ನಿಯಮ ಉಲ್ಲಂಘನೆ ಮಾಡಿದ್ದು, 20ರಂದು ಸಲ್ಲಿಕೆ ಮಾಡಲಾಗಿರುವ ದಾಖಲೆಯನ್ನು 19ರಂದೇ ಅಪ್ಲೋಡ್ ಮಾಡಲಾಗಿದೆ ಎಂದು ತೋರಿಸುತ್ತಿದ್ದಾರೆ. ಇದು ಹೇಗೆ ಸಾಧ್ಯ? ಇದರಲ್ಲಿ ನಡ್ಡಾ, ಅಮಿತ್ ಶಾ, ಮೋದಿ ಅಥವಾ ನಮ್ಮ ಪೇಸಿಎಂ ಬೊಮ್ಮಾಯಿ ಅವರು ಹಸ್ತಕ್ಷೇಪ ಮಾಡಿದ್ದಾರಾ? ಕೇಂದ್ರ ಚುನಾವಣಾ ಆಯೋಗದ ರಾಜ್ಯ ವಿಭಾಗದ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಯಾರು ಇದರಲ್ಲಿ ಪ್ರಭಾವ ಬೀರಿದ್ದಾರೆ ಎಂಬುದನ್ನು ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಜೇವರ್ಗಿಯಲ್ಲಿ ಪದವೀಧರ ಯುವಕ ಉದ್ಯೋಗ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದರ ಹೊರತಾಗಿ 7-8 ಲಕ್ಷ ಖಾಸಗಿ ಉದ್ಯೋಗಗಳಿಗೆ ಅವಕಾಶವಿದೆ. ದುರಂತವೆಂದರೆ ಕರ್ನಾಟಕ ಸರ್ಕಾರ ಪ್ರತಿ ತಿಂಗಳು ಉದ್ಯೋಗ ಮೇಳ ಮಾಡುತ್ತಿದೆ. ಕೈಗಾರಿಕಾ ಸಚಿವರಾದ ನಿರಾಣಿ ಅವರ ಖಾತೆಯಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಈ ಇಲಾಖೆ ಉದ್ಯೋಗ ನೀಡುವ ಬದಲು ಖಾಸಗಿ ಕಂಪನಿಗಳಿಗೆ ಭೂಮಿ ನೀಡುವುದು, ಅವರಿಂದ 40% ಕಮಿಷನ್ ಪಡೆಯುವ ಕೆಲಸ ಆಗುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ:ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್