ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಎಲ್ಲಾ ಆಕ್ಸಿಜನ್ ತಾವೊಬ್ಬರೇ ಕುಡಿದಿದ್ದ ಡಿ.ಕೆ.ಶಿವಕುಮಾರ್ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ ಎಂದು ಡಿಕೆಶಿ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಆಕ್ಸಿಜನ್ ಬಗ್ಗೆ ಬಹಳ ನೆನಪಿದೆ. ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿಯವರ ಜೊತೆ ಕೈ ಎತ್ತಿ ಎತ್ತಿ ಅವರ ಎಲ್ಲಾ ಆಕ್ಸಿಜನ್ ಕುಡಿದರು. ಉಳಿದ ಕಾಂಗ್ರೆಸ್ ಮಂತ್ರಿಗಳಿಗೆ ಕಡಲೆ ಬೀಜ ಕೂಡ ಸಿಗಲಿಲ್ಲ. ಇಂಗಾಲದ ಡೈಆಕ್ಸೈಡ್ ಕುಡಿಸಿದ್ದರು. ಆಕ್ಸಿಜನ್ ಅವರು ಮಾತ್ರ ಸೇವಿಸಿದ್ದರು. ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದರು.
ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿ ಹಾಗೂ ಅವರಿಗೆ ಆಕ್ಸಿಜನ್ ಕಡಿಮೆಯಾಗಿದೆ ಎಂದು 5 ಜನರನ್ನು ಆಕ್ಸಿಜನ್ ಕೊಡಲು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಅದೂ ಕೂಡ ಇವರನ್ನು ಹೇಳದೆ ಕೇಳದೆ ದೆಹಲಿಯವರೇ ನೇಮಕ ಮಾಡಿದ್ದಾರೆ. ಆಕ್ಸಿಜನ್ ಯಾರಿಗೆ ಕಡಿಮೆಯಾಗಿದೆ ಎಂದು ತಿಳಿದುಕೊಂಡು ಬೇರೆಯವರ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್, ಜೆಡಿಎಸ್ನಿಂದ ಬಿಜೆಪಿಗೆ ಬಂದಿದ್ದವರಿಗೆ ನಾವು ಗೌರವ ನೀಡಿದ್ದೇವೆ. ಅದೇ ನೀವು ಅವರನ್ನೆಲ್ಲಾ ಕಡೆಯ ಬೆಂಚಿನಲ್ಲಿ ಕೊಡಿಸಿದ್ದೀರಿ. ಬರೀ ಬಜೆಟ್ ಭಾಷಣವನ್ನು ಹೊಗಳಲು ಸೀಮಿತಗೊಳಿಸಿದ್ದೀರಿ. ಆದರೆ ನಾವು ಅವರಿಗೆಲ್ಲಾ ಗೌರವ ಕೊಟ್ಟಿದ್ದೇವೆ, ಪ್ರಮುಖ ಖಾತೆಗಳನ್ನು ಕೊಟ್ಟಿದ್ದೇವೆ. ನೀವು ಕಡೆಯ ಸಾಲಿನಲ್ಲು ಕೂರಿಸಿ ಅವಮಾನ ಮಾಡಿದ್ದವರಿಗೆ ನಾವು ಮೊದಲ ಸಾಲಿನಲ್ಲಿ ಕೂರಿಸಿ ಗೌರವ ಕೊಟ್ಟಿದ್ದೇವೆ. ನಾವು ನಂಬಿದವರಿಗೆ ಮೋಸ ಮಾಡಲ್ಲ, ಯಡಿಯೂರಪ್ಪ ಕೊಟ್ಟು ಮಾತು ತಪ್ಪಲ್ಲ. ಮಾತು ತಪ್ಪದ ಮುಖ್ಯಮಂತ್ರಿ ಇದ್ದರೆ ಅದು ಯಡಿಯೂರಪ್ಪ ಮಾತ್ರ ಎಂದರು.
ಇದನ್ನೂ ಓದಿ: ನಾಲ್ವರು ಅಸಮಾಧಾನಿತ ಸಚಿವರಿಗೆ ಖಾತೆಗಳ ಮರು ಹಂಚಿಕೆ: ರಾಜ್ಯಪಾಲರ ಅಂಕಿತ