ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗಾಗಿ ಇನ್ನು ಮುಂದೆ ಸರತಿ ಸಾಲಿನ ಕ್ರಮವನ್ನು ಅನುಸರಿಸಲಾಗುವುದು, ಬೆಡ್ ಬುಕ್ ಮಾಡಲು ಕರೆ ಮಾಡುವವರಿಗೆ ಕ್ಯೂ ವ್ಯವಸ್ಥೆ ಮೂಲಕ ಹಾಸಿಗೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಕೋವಿಡ್ ವಾರ್ ರೂಮ್ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸೋಂಕಿತರು ಬೆಡ್ ಬುಕ್ ಮಾಡಲು ಕರೆ ಮಾಡಿದಾಗ ಆಟೋಮ್ಯಾಟಿಕ್ ಕ್ಯೂ ಸಂಖ್ಯೆ ಕೊಡಲಾಗುತ್ತದೆ. ಒಟ್ಟು ರಿಜಿಸ್ಟ್ರೇಷನ್ ಸಂಖ್ಯೆ ಆಧಾರದಲ್ಲಿ ಯಾವ ಸಂಖ್ಯೆಯಲ್ಲಿದ್ದಾರೆ, ಈಗ ಯಾವ ಸಂಖ್ಯೆಯ ದಾಖಲಾತಿ ನಡೆಯುತ್ತಿದೆ ಎಂಬ ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಮುಂದಿನ ಎರಡು ದಿನಗಳಲ್ಲಿ ಆರಂಭವಾಗಲಿದೆ. ಇದರ ಪರಿಣಾಮಗಳನ್ನು ಅನುಸರಿಸಿ ಮುಂದೆ ಇದನ್ನು ಇಡೀ ರಾಜ್ಯಕ್ಕೆ ಅನ್ವಯಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.
ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ರೋಗದ ತೀವ್ರತೆ ಅನುಸರಿಸಿ ಹಾಸಿಗೆ ಹಂಚಿಕೆ ಮಾಡಲಾಗುತ್ತದೆ ಎಂದೂ ತಿಳಿಸಿದರು.
ವಾರ್ ರೂಮ್ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿ ಮಾಡಲು ಈಗಿರುವ ಸಾಫ್ಟ್ವೇರ್ನಲ್ಲಿ ಅನೇಕ ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ. ಇದು ಕೆಲವೇ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಸಚಿವ ಲಿಂಬಾವಳಿ ಮಾಹಿತಿ ನೀಡಿದರು.
ಈಗಿರುವ ಎಸ್ಎಂಎಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ ಹಾಸಿಗೆ ಹಂಚಿಕೆಯಾಗಿರುವ ರೋಗಿಗಳು ನಾಲ್ಕು ಗಂಟೆಯ ಒಳಗೆ ಆಸ್ಪತ್ರೆ ತಲುಪದೇ ಹೋದರೆ ಅವರಿಗೆ ಮತ್ತೆ ಎಸ್ಎಂಎಸ್ ಮೂಲಕ ಜಾಗೃತಗೊಳಿಸುವ ಮೆಸೇಜ್ ಕಳುಹಿಸಲಾಗುತ್ತದೆ ಮತ್ತು ಆಸ್ಪತ್ರೆಯಲ್ಲಿನ ನೋಡಲ್ ಅಧಿಕಾರಿಗೆ ಕೂಡ ಮೆಸೇಜ್ ಹೋಗುತ್ತದೆ. ಪ್ರಸ್ತುತ ಟ್ರಯಾಜಿಂಗ್ ಕೇಂದ್ರಗಳಲ್ಲಿ ದೈಹಿಕ ತಪಾಸಣೆಗೆ ಒಳಗಾಗುವವರಿಗೆ ವೈದ್ಯರ ಸಲಹೆ ಮೇರೆಗೆ ವ್ಯಾಪ್ತಿಯ ರೆಫರಲ್ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಲು ವ್ಯವಸ್ಥೆ ರೂಪಿಸಲಾಗಿದೆ ಎಂದರು.
ರೋಗಿಗಳ ವಿವರಗಳನ್ನು ಬಿಬಿಎಂಪಿ ಸಿದ್ಧಪಡಿಸಿರುವ ಮಾದರಿ ಅರ್ಜಿಯಲ್ಲಿ ತುಂಬುವ ಕುರಿತು ಟ್ರಯಾಜಿಂಗ್ ಕೇಂದ್ರದ ವೈದ್ಯರಿಗೆ ಹಾಗೂ ಸಹಾಯಕರಿಗೆ ತರಬೇತಿ ಶಿಬಿರಗಳನ್ನು ಸಹ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಬಿಎಂಪಿ ಕೋವಿಡ್ ವಾರ್ ರೂಮ್ ನಿರ್ವಹಾಧಿಕಾರಿ ಪೊನ್ನುರಾಜ್, ಕುಮಾರ್ ಪುಷ್ಕರ್, ವಿಶ್ವಜಿತ್, ವಿಶೇಷ ಆಯುಕ್ತ ರಣದೀಪ್, ಡಾಕ್ಟರ್ ಅರುಂಧತಿ ಚಂದ್ರಶೇಖರ್, ಎನ್.ಟಿ. ಅಬ್ರೂ ಹಾಗೂ ಡಾ. ಭಾಸ್ಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.