ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ಸಚಿವ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ಕೆರೆ ನುಂಗಿದ್ದಾರೆ ಎಂಬ ವಿಚಾರವಾಗಿ ಹೋರಾಟ ಮುಂದುವರಿಸಿದ್ದಾರೆ. ತಿಂಗಳ ಹಿಂದೆ ಸಮಾರಂಭವೊಂದರಲ್ಲಿ ಮುನಿರತ್ನ ಕೆರೆ ನುಂಗಿದ್ದಾರೆ. ಸಮಾರಂಭ ಆಯೋಜಿಸಿದ್ದ ಸ್ಥಳವೇ ನುಂಗಿದ ಕರೆಯಲ್ಲೇ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸ್ಥಳೀಯ ಶಾಸಕ ಹಾಗೂ ಸಚಿವ ಮುನಿರತ್ನ ಇದ್ದ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಅಶೋಕ್ ಮುಜುಗರವಾಗಿ ವೇದಿಕೆಯಿಂದ ಕೆಳಗಿಳಿದು ಹೋಗಿದ್ದರು. ಒಟ್ಟಾರೆ ಅಲ್ಲಿಂದ ಕೆರೆ ಕಳ್ಳ ಎಂದು ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್ ನಾಯಕರು ಇದೀಗ ಕೆರೆ ಕಳ್ಳ ಹೆಸರಿನ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರ ನೋಂದಣಿ ಆಗಿದೆ. ಸುನಂದ ಟಾಕೀಸ್ ಹೆಸರಿನಲ್ಲಿ ಚಲನ ಚಿತ್ರ ನೋಂದಾಯಿಸಲಾಗಿದೆ. ರಾಜರಾಜೇಶ್ವರಿನಗರ ಕಾಂಗ್ರೆಸ್ ಬೆಂಬಲಿತ ನಿರ್ಮಾಪಕರಿಂದ ಚಿತ್ರ ನೋಂದಣಿ ಆಗಿದೆ. ಹಿಂದೆ ಉರಿಗೌಡ, ನಂಜೇಗೌಡ ಚಿತ್ರ ತಯಾರಿಸಲು ಮುಂದಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಒಕ್ಕಲಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಮುನಿರತ್ನ ವಿರುದ್ಧ ಇದೀಗ 'ಒಕ್ಕಲಿಗಾಸ್ ರಾಜರಾಜೇಶ್ವರಿನಗರ' ಹೆಸರಿನ ಫೇಸ್ಬುಕ್ ಖಾತೆ ಮೂಲಕ ಕೆರೆ ಕಳ್ಳ ಚಿತ್ರದ ನೋಂದಣಿ ಮಾಹಿತಿ ಹೊರಬಿಡಲಾಗಿದೆ. ಇದನ್ನು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್ ಸೇರಿದಂತೆ ಹಲವರು ಶೇರ್ ಮಾಡಿದ್ದಾರೆ.
ಮೊನ್ನೆಯಷ್ಟೇ ಸಂಸದ ಡಿ.ಕೆ.ಸುರೇಶ್ ವಿರುದ್ದ ಮಾತನಾಡಿದ್ದ ಮುನಿರತ್ನ ವಿರುದ್ಧ ಇದೀಗ ಹೊಸದೊಂದು ಹೋರಾಟ ಆರಂಭವಾಗಿದೆ. ಉರಿಗೌಡ-ನಂಜೇಗೌಡ ವಿವಾದ ಇಟ್ಟು ಮುನಿರತ್ನ ಮಾಡಿದ್ದ ಚಿಂತನೆಗೆ ಅದೇ ರೀತಿಯಲ್ಲಿ ಟಾಂಗ್ ಸಿಕ್ಕಿದೆ. ನೈಜ ಚಿತ್ರಗಳ ಆಧಾರಿತ ಸತ್ಯಕತೆ ಎಂಬ ಅಡಿಬರಹ ಅಡಿ ಚಿತ್ರ ನೋಂದಣಿಯಾಗಿದೆ. ಈ ಚಿತ್ರದ ಶೀರ್ಷಿಕೆಯು ಯಾವ ವ್ಯಕ್ತಿಗಾದರೂ ಪರೋಕ್ಷವಾಗಿ ಅನ್ವಯವಾದಲ್ಲಿ ಅದು ಅವರ ಪಾಪದ ಪ್ರಾಯಶ್ಚಿತ್ತವೇ ಹೊರತು ನಾವು ಜವಾಬ್ದಾರರಲ್ಲ ಎಂಬ ಅಡಿಬರಹದೊಂದಿಗೆ ಪರೋಕ್ಷ ಎಚ್ಚರಿಕೆ ಸಹ ನೀಡಲಾಗಿದೆ.
ಪ್ರತಿಕ್ರಿಯೆ: ಸೂರ್ಯ ಮುಕುಂದರಾಜ್ ಅವರ ಪೋಸ್ಟ್ಗೆ ಬಿ.ಗೌಡ ಎಂಬುವರು ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಇಷ್ಟು ದಿನ ಇಂತಹ ಕೌಂಟರ್ಗಳಿಗೆ ಕಾಯುತ್ತಿದೆ. ಈ ಬಿಜೆಪಿ ಯವರು ರಾಜ್ಯದಲ್ಲೂ ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೇ ಅನ್ನೋ ದುರಹಂಕಾರದಲ್ಲಿ ಕೆಲವು ವರ್ಷಗಳಿಂದ ಮನಸ್ಸಿಗೆ ಬಂದಂತೆ ಸರ್ವಾಧಿಕಾರಿಗಳ ರೀತಿಯಲ್ಲಿ ವರ್ತಿಸುತಿದ್ದಾರೆ. ಅದರಲ್ಲೂ ಈಗ ಬಿಜೆಪಿಗೆ ವಲಸೆ ಹೋಗಿರುವ ಬ್ಲೂ ಬಾಯ್ಸ್ ಇನ್ನೂ ಅತಿಯಾಗಿ ವರ್ತಿಸುತ್ತಿದ್ದಾರೆ. ಸೇರಿಗೆ ಸವಾಸೇರು ಅನ್ನೋತರ ಆಗಾಗ ಪ್ರತಿಯೊಂದಕ್ಕೂ ಕೌಂಟರ್ ಕೊಡ್ತಾ ಇದ್ದರೆ ಆಗ ಮುಚ್ಚಿಕೊಂಡು ಸುಮ್ಮನಾಗ್ತಾರೆ".
"ನಾನು ಬುದ್ದಿ ಬಂದಾಗಿನಿಂದ ಜೆಡಿಎಸ್ ಪಕ್ಷದವನು. ಆದರೆ ಕುಮಾರಸ್ವಾಮಿ ಸಿದ್ದರಾಮಯ್ಯ ಇಬ್ಬರೂ ಧೈರ್ಯದಿಂದ ಬಿಜೆಪಿವರಿಗೆ ಉತ್ತರ ಕೊಡೋ ಹಾಗೇ ಯಾರು ಕೌಂಟರ್ ಕೊಡೋದಿಲ್ಲ. ಅವರ ಕೆಳಹಂತದ ನಾಯಕರು ಈ ರೀತಿ ಕೌಂಟರ್ ಕೊಡ್ತಾ ಇರಬೇಕು. ಪ್ರತಿಯೊಂದನ್ನೂ ಸಿದ್ದಣ್ಣ ಕುಮಾರಣ್ಣನವರೇ ಮಾಡೋಕೆ ಆಗಲ್ಲ. ಎಲ್ಲಾ ಪಕ್ಷಗಳ ಕೆಲವು ಶಾಸಕರು, ಸಂಸದರು ಒಳಗೊಳಗೆ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುವುದರಿಂದ ಆಡಳಿತ ಪಕ್ಷಗಳು ಈ ರೀತಿ ವರ್ತಿಸುತ್ತಿವೆ. ನನ್ನ ಹತ್ತಿರ ಆಸ್ತಿ ಏನಾದರೂ ಇದ್ದಿದ್ದರೆ ಈ ಬಿಜೆಪಿವರಿಗೆ ಕೊಡೋ ಕೌಂಟರ್ಗೆ ರೀಕೌಂಟರ್ ಕೊಡ್ತಾ ಇದ್ದೆ".
"ಮೋದಿ ಪ್ರಧಾನಿಯಾದ ಮೊದಲ ವರ್ಷ, ಅವರು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಹಂಗಂತೆ ಹಿಂಗಂತೆ ಕೇಳಿ ನಾನು ಅಭಿಮಾನಿ ಆಗಿದ್ದೆ. ಆದರೆ ಒಂದೇ ವರ್ಷಕ್ಕೆ ಇವರ ಸುಳ್ಳಿನ ವಾಸನೆ ಕೋಮುದ್ವೇಷ, ಸರ್ವಾಧಿಕಾರ ಮೊದಲ ಪಯಣದಲ್ಲೇ ಗೊತ್ತಾಗಿ, ದೇಶದ ದಿವಾಳಿತನ ಅವತ್ತೇ ಕಣ್ಣ ಮುಂದೆ ಬಂದಿತ್ತು. ದೇವೇಗೌಡರು ಪ್ರಧಾನಿ ಆಗಿದ್ದಾಗ ಅವರ ಆಡಳಿತ ನೋಡಿರಲಿಲ್ಲ. ಆಗ ನಾನು ಚಿಕ್ಕವನು. ಆದರೆ ನಂತರ ತಿಳಿದುಕೊಂಡಾಗ ಸಿಕ್ಕ ಅವಕಾಶವನ್ನ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಿದ್ದಾರೆ".
ನಂತರ ಪ್ರಬುದ್ಧನಾದ ಮೇಲೆ ನಾನು ನೋಡಿದ ದೇಶದ ಹೆಮ್ಮೆಯ ಪ್ರಧಾನಿ ನಮ್ಮ ವಿಶ್ವ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರಾದ ಡಾ ಮನಮೋಹನ್ ಸಿಂಗ್ ಅವರು. ಆರ್ಥಿಕ ತಜ್ಞ ಸಿಂಗ್ ಎಲ್ಲಿ , ಟೀ ಮಾರೋ ತರ ದೇಶವನೇ ಮಾರುತ್ತಿರುವ ಈ ಮೋದಿ ಎಲ್ಲಿ. ಕರ್ನಾಟಕದಲ್ಲಿ ಈ ಕೋಮುವಾದಿ ಬಿಜೆಪಿ ಸರ್ಕಾರ ಬರೋಕೆ ಕಾಂಗ್ರೆಸ್ ಜೆಡಿಎಸ್ನ ಕೆಲ ಮುಖಂಡರ ವೈಮನಸ್ಸೇ ಕಾರಣ. ಆನೆ ಮದ ಹತ್ತಿದಾಗ ಊರಿನ ಜನ ಒಟ್ಟಿಗೆ ಸೇರಿ ಮದ ಇಳಿಸಬೇಕು. ಅದನ್ನು ಬಿಟ್ಟು ಊರ ಜನರೇ ಕಿತ್ತಾಡಿಕೊಂಡು ಕೂರಬಾರದು. ಹೀಗೆ ಬಿಟ್ಟರೆ ಈ ಕನ್ನಡ ದ್ರೋಹಿ ಬಿಜೆಪಿಯವರು ಕರ್ನಾಟಕವನ್ನ ಗುಜರಾತ್ ಗೆ ಮಾರಿಬಿಡುತ್ತಾರೆ ಎಚ್ಚರ ಕನ್ನಡಿಗ" ಎಂದಿದ್ದಾರೆ.
ಹಿನ್ನೆಲೆ.. ಮುನಿರತ್ನ ಅವರು ಉರಿಗೌಡ-ನಂಜೇಗೌಡ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿ, ಮುಹೂರ್ತ ನೆರವೇರಿಸಲು ದಿನಾಂಕ ನಿಗದಿ ಮಾಡಿದ್ದರು. ಸಿನಿಮಾದ ಬಗ್ಗೆ ವಿರೋಧ ವ್ಯಕ್ತವಾದಂತೆ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಅವರ ಸೂಚನೆಯಂತೆ ಮುನಿರತ್ನ ಸಿನಿಮಾ ಸ್ಥಗಿತಗೊಳಿಸಲು ನಿರ್ಧರಿಸಿದ್ದರು.