ಬೆಂಗಳೂರು: ಸರ್ಕಾರದ ವಿರುದ್ಧ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೌನ ಪ್ರತಿಭಟನೆ ಮಾಡಲು ಮುಂದಾಗಿದ್ದ ಹಲವು ಖಾಸಗಿ ಶಾಲೆಗಳ ಸಂಘಟನೆಗಳೀಗ ಪ್ರತಿಭಟನೆ ಕೈ ಬಿಟ್ಟಿವೆ. ಪ್ರತಿಭಟನೆ ಕಾವು ಹೆಚ್ಚಾದ ಕಾರಣ, ಶಿಕ್ಷಣ ಸಚಿವರು, ಶಾಸಕರ ಭವನದಲ್ಲಿ ಸಭೆಯನ್ನ ಕರೆದಿದ್ದು, ಸಭೆಯಲ್ಲಿ ಶಿಕ್ಷಣ ಸಚಿವರೊಂದಿಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಪರಿಷತ್ ಸದಸ್ಯ ಶ್ರೀಕಂಠೇಗೌಡ್ರು ಭಾಗಿಯಾಗಿದ್ದರು. ಮಾರ್ಚ್ 31 ರೊಳಗೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಕಾರಣ ಶಿಕ್ಷಣ ಸಚಿವರ ವಿರುದ್ಧದ ಮೌನ ಪ್ರತಿಭಟನೆ ಕೈಬಿಡಲಾಗಿದೆ.
ಸಭೆ ಮುಗಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೆಲವು ಶಾಲಾ ಶಿಕ್ಷಕರ ಸಂಘಟನೆಗಳು ಹಲವು ಬೇಡಿಕೆ ಮುಂದಿಟ್ಟುಕೊಂಡು ಹೋರಾಟಕ್ಕೆ ಕರೆ ಕೊಟ್ಟಿತ್ತು. ನಾನು ಹೋರಾಟ ಬೇಡ, ಮಾತುಕತೆಗೆ ಬನ್ನಿ ಎಂದು ಆಹ್ವಾನಿಸಿದ್ದೆ. ಸಂಘಟನೆಯ ಎಲ್ಲ ಬೇಡಿಕೆ ಸೌಹಾರ್ದಯುತವಾಗಿ ಚರ್ಚಿಸಲಾಗಿದೆ.
ಪ್ರಮುಖವಾಗಿ 1995 ರಿಂದ 2000 ಇಸವಿ ತನಕದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ ಎಂಬ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಈ ವಿಚಾರದ ಬಗ್ಗೆ ಸಿಎಂ ಜೊತೆ ಬಜೆಟ್ಗೂ ಮುನ್ನವೇ ಚರ್ಚಿಸಲಾಗಿದ್ದು, ಸರ್ಕಾರ ಇದಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಬಜೆಟ್ ಭಾಷಣದಲ್ಲಿ ಬೇಡಿಕೆಗಳನ್ನು ಈಡೇರಿಸುವ ಆಸೆ ಸಂಘಟನೆ ಹೊತ್ತಿತ್ತು. ಆದರೆ, ಶೀಘ್ರದಲ್ಲೇ ಸಂಘಟನೆಯ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕೊನೆಗೂ ಸಿಡಿ ಲೇಡಿ ಪೋಷಕರು ಪತ್ತೆ: ಯುವತಿಯ ತಂದೆ-ತಾಯಿ ಹೇಳಿಕೆ ದಾಖಲು?
ಇನ್ನು ಶಾಲೆಗಳ ನೋಂದಣಿ ವಿಚಾರ ಮತ್ತು ಕಟ್ಟಡ ರಿನಿವಲ್ ವಿಚಾರ ದೊಡ್ಡ ಸಮಸ್ಯೆ ಆಗಿದ್ದು, ಇದಕ್ಕಾಗಿ ಸಮಿತಿ ರಚನೆ ಮಾಡಿ ಸರಳೀಕರಣದ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಯುವ ತನಕ ಯಾವುದೇ ಮುಷ್ಕರ, ಪ್ರತಿಭಟನೆ ನಡೆಸದಿರುವ ಬಗ್ಗೆ ಸಂಘಟನೆ ಭರವಸೆ ನೀಡಿದ್ದು, ಎಲ್ಲವೂ ಸುಖ್ಯಾಂತವಾಗಿದೆ ಎಂದು ತಿಳಿಸಿದರು.
ನಂತರ ರೂಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಮಾ. 31 ರೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೂ ಪಾಲು ಕೊಡಲು ಒಪ್ಪಿದ್ದಾರೆ. ಶಾಲಾ ಶುಲ್ಕ ಶೇಕಡಾ 70 ರಷ್ಟು ಪಡೆಯುವ ಕುರಿತು ಮಾತುಕತೆ, ಪೋಷಕರು ಆನ್ ಲೈನ್ ಕ್ಲಾಸ್ ಹೆಸರಿನಲ್ಲಿ ಶುಲ್ಕ ಕಟ್ಟದೇ ಇರುವ ವಿಚಾರವೂ ಚರ್ಚೆ ಆಗಿದೆ. ಆರ್ ಟಿ ಇ ಹಣವನ್ನು ಒಂದು ಕಂತಿನಲ್ಲಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಕಟ್ಟಡ ಸುರಕ್ಷತೆ, ಅಗ್ನಿಶಾಮಕ ಸುರಕ್ಷತೆ ವಿಚಾರದಲ್ಲಿ ಸಮಿತಿ ರಚನೆಗೆ ಒತ್ತಾಯವಿದ್ದು, ಸರಳೀಕರಣ ನಿಯಮ ರೂಪಿಸಿ ನೀಡುವ ಭರವಸೆ ನೀಡಿದ್ದಾರೆ. ಸಮಿತಿಯಲ್ಲಿ ಪೋಷಕರು, ಶಿಕ್ಷಕರನ್ನು ಸೇರಿಸುವ ನಮ್ಮ ಒತ್ತಾಯಕ್ಕೆ ಒಪ್ಪಿಗೆ ನೀಡಿದ್ದಾರೆ. ಮಾರ್ಚ್ 31 ರ ತನಕ ಕಾದು, ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ಕೈಗೆತ್ತಿಕೊಳ್ಳಲು ನಿರ್ಧಾರ ಮಾಡಿದ್ದೀವಿ ಎಂದು ತಿಳಿಸಿದರು.