ಬೆಂಗಳೂರು: ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತೆ ತಿರುಗಿಬಿದ್ದಿದ್ದು, ಇದೇ 23ರಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ.
ಕ್ಯಾಮ್ಸ್ ಸೇರಿದಂತೆ ಒಟ್ಟು 10 ರಾಜ್ಯ ಸಂಘಟನೆಗಳನ್ನೊಳಗೊಂಡ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಪ್ರತಿಭಟನಾ ಱಲಿ ನಡೆಸಲು ನಿರ್ಧರಿಸಿವೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ಸಂಕಷ್ಟ, ಅವೈಜ್ಞಾನಿಕ ಶುಲ್ಕ ಕಡಿತ, ಕೋವಿಡ್ ಸಂಕಷ್ಟದಲ್ಲೂ ಹಳೆಯ ಶಾಲೆಗಳಿಗೆ ಹೊಸ ಶಾಲೆಯ ಷರತ್ತು ವಿಧಿಸಿ ಮಾನ್ಯತೆ ನವೀಕರಣ ಹೆಸರಲ್ಲಿ ಭ್ರಷ್ಟಾಚಾರ, ಶಾಲೆಗಳಿಗೆ ಕಡ್ಡಾಯ ದಾಖಲಾತಿ, ಹಾಜರಾತಿ, ಕನಿಷ್ಟ ಮೌಲ್ಯ ಮಾಪನಕ್ಕೆ ಒತ್ತು ನೀಡದೇ ಇರುವುದು, ಪ್ರಾಥಮಿಕ ಶಾಲೆಗಳ ಪುನಾರಂಭದ ಗೊಂದಲ, ಭ್ರಷ್ಟಾಚಾರಕ್ಕೆ ತೊಡಗಿರುವ ಬಿಇಓ, ಡಿಡಿಪಿಐ ಕಚೇರಿಯ ನಿಯಂತ್ರಣ ಇಲ್ಲವಾಗಿರುವುದು ಸೇರಿದಂತೆ ವಿವಿಧ ಧೋರಣೆಗಳನ್ನು ಖಂಡಿಸಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ನಾನು ಹಾಳಾಗಿದ್ದು ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ: ಎಚ್.ವಿಶ್ವನಾಥ್ ಕಿಡಿ
ಅಂದು 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗಲಿದ್ದು, ಆ ದಿನದ ಪಾಠವನ್ನು ಶನಿವಾರ ಪೂರ್ಣ ದಿನವಾಗಿ ನಡೆಸುವಂತೆ ಶಿಫಾರಸು ಮಾಡಲಾಗಿದೆ ಎಂದರು.