ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೆಆರ್ಐಡಿಎಲ್ ಸೇರಿದಂತೆ ಒಟ್ಟು 26 ನಿಗಮಗಳಿಗೆ ಅಧ್ಯಕ್ಷರನ್ನು ನೇಮಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ಆರ್ ವಿಶ್ವನಾಥ್, ಚಿತ್ರನಟಿ ಹಾಗೂ ಮಾಜಿ ಎಂಎಲ್ಸಿ ತಾರಾ, ರಾಮನಗರ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ ರುದ್ರೇಶ್ ಸೇರಿದಂತೆ ಹಲವು ಮುಖಂಡರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಭಾಗ್ಯ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿಡಿಎ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ನೇಮಕವಾಗಿದ್ದಾರೆ. ಕಲಬುರಗಿಯಲ್ಲಿರುವ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ (ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ) ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ ಲಿಂಗ ರೆಡ್ಡಿ ಗೌಡ ನೇಮಕವಾಗಿದ್ದಾರೆ.
ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ನಿರ್ದೇಶಕರ ಮಂಡಳಿ ನಿರ್ದೇಶಕ ಹಾಗೂ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ ರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ಐಡಿಎಲ್) ಅಧ್ಯಕ್ಷರಾಗಿ ಎಂ. ರುದ್ರೇಶ್ ನೇಮಕಗೊಂಡಿದ್ದಾರೆ. ತಾರಾ ಅನುರಾಧಗೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.
ತಿಪಟೂರಿನ ಶಾಸಕ ಬಿ.ಸಿ. ನಾಗೇಶ್ಗೆ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷ ಸ್ಥಾನ (ಈ ಹಿಂದೆ ತೆಂಗಿನ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಾಗ ತಿರಸ್ಕರಿಸಿದ್ದರು. ಹೀಗಾಗಿ ಬಿ.ಸಿ. ನಾಗೇಶ್ಗೆ ಈ ಬಾರಿ ಪ್ರಭಾವಿ ಕಾರ್ಮಿಕ ಕಲ್ಯಾಣ ಮಂಡಳಿ ನೀಡಿ ಆದೇಶ ನೀಡಲಾಗಿದೆ). ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನವನ್ನು ಶಿರಾ ಕ್ಷೇತ್ರದ ಬಿ.ಕೆ. ಮಂಜುನಾಥ್ಗೆ ನೀಡಿ ಆದೇಶ ಹೊರಡಿಸಲಾಗಿದೆ.
ಶಿರಾ ಕ್ಷೇತ್ರದ ಎಸ್.ಆರ್.ಗೌಡಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನ. ಕೆ.ವಿ. ನಾಗರಾಜ್ಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನ. ಸವಿತಾ ವಿಶ್ವನಾಥ್ ಅಮರ್ ಶೆಟ್ಟಿಗೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದ ಅಧ್ಯಕ್ಷ ಸ್ಥಾನ.
ಚಂದು ಪಾಟೀಲ್ಗೆ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಪಟ್ಟ. ತಿಪ್ಪೇಸ್ವಾಮಿಗೆ ಕಾಡಾ ನಿಗಮದ ಅಧ್ಯಕ್ಷ ಸ್ಥಾನ, ಚಿಕ್ಕನಾಯಕನಹಳ್ಳಿಯ ಕಿರಣ್ ಕುಮಾರ್ಗೆ ಜೈವಿಕ ತಂತ್ರಜ್ಞಾನ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ.
ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಚ್ ಹನುಮಂತಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರಪ್ಪ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮುನಿಕೃಷ್ಣ, ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಮೊದಲ ಅಧ್ಯಕ್ಷರಾಗಿ ರಘು ಆರ್, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಾಬು ಪತ್ತಾರ್, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಜಿಕೆ ಗಿರೀಶ್ ಉಪ್ಪಾರ್, ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಎಸ್ ನರೇಶ್ ಕುಮಾರ್ ನೇಮಕ ಆಗಿದ್ದಾರೆ.
ನೂತನವಾಗಿ ನೇಮಕಗೊಂಡಿರುವ ಅಧ್ಯಕ್ಷರು ಕೂಡಲೇ ಜಾರಿಗೆ ಬರುವಂತೆ ತಮ್ಮ ಅಧಿಕಾರ ವಹಿಸಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಸಂಪುಟ ಸೇರಿಕೊಳ್ಳಲು ಬಿಜೆಪಿ ಶಾಸಕರ ಲಾಬಿ, ಸಚಿವಾಕಾಂಕ್ಷಿಗಳ ಸಮಾಧಾನ ಮಾಡಲು ಮುಂದಾದ ಸಿಎಂ ಖಾಲಿಯಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ತರಾತುರಿಯಲ್ಲಿ ನೇಮಕ ಮಾಡಿದ್ದಾರೆ.
ಇದನ್ನೂ ಓದಿ: ಭೂಗತ ಪಾತಕಿ ರವಿ ಪೂಜಾರಿಗೆ ರಕ್ಷಣೆ ನೀಡಲು ಮುಂಬೈ ಪೊಲೀಸರಿಗೆ ಹೈಕೋರ್ಟ್ ಸೂಚನೆ