ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟಲು ವೈದ್ಯರು, ನರ್ಸ್ ಹಾಗೂ ಇತರೆ ಆರೋಗ್ಯ ರಕ್ಷಣಾ ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಹೋರಾಟ ಶ್ರಮವಹಿಸುತ್ತಿದ್ದಾರೆ. ಸೋಂಕಿತರ ಹಾಗೂ ಇತರೆ ರೋಗಿಗಳ ಚಿಕಿತ್ಸೆಗೆ ಬಳಸುವ ತ್ಯಾಜ್ಯವನ್ನು ಆಸ್ಪತ್ರೆಗಳು ಹೇಗೆ ವಿಲೇವಾರಿ ಮಾಡುತ್ತಿವೆ ಎಂಬ ಸಹಜ ಪ್ರಶ್ನೆ ಜನಸಾಮನ್ಯರಲ್ಲಿ ಮೂಡುತ್ತದೆ. ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಾನದಡಿ ವಿಲೇವಾರಿ ಮಾಡುವುದರ ವಿವರಣೆ ಇಲ್ಲಿದೆ.
ಕೊರೊನಾದಿಂದ ಎಷ್ಟು ಆತಂಕ ಇದಿಯೋ ಮಾಸ್ಕ್, ಪಿಪಿಇ ಕಿಟ್‌ಗಳ ತ್ಯಾಜ್ಯದಿಂದಲೂ ಅಷ್ಟೇ ಆತಂಕವಿದೆ. ಜನ ಸಾಮಾನ್ಯರು ಮಾಸ್ಕ್‌ಗಳನ್ನು ಧರಿಸಿ ಸುರಕ್ಷಿತವಾಗಿದ್ದಾರೆ. ನಾವು ಪಿಪಿಇ ಕಿಟ್ ಧರಿಸಿ ಕೊರೊನಾ ವಿರುದ್ಧ ಹೋರಾಡುತ್ತೇವೆ. ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಧರಿಸಿರುವ ವೇಳೆ ಎಸಿ ಬಳಸುವಂತಿಲ್ಲ. ಜೊತೆಗೆ ಒಮ್ಮೆ ಧರಿಸಿದರೆ 6-8 ಗಂಟೆ ತನಕ ತೆಗೆಯುವಂತಿಲ್ಲ. ಇದು ಅನಿವಾರ್ಯ ಕೂಡ ಎನ್ನುತ್ತಾರೆ ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ.ವಿದ್ಯಾ ಭಟ್.
ಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡುವ ವೇಳೆ ಹಸಿವಾದರೆ ಆಹಾರ ಸೇವಿಸುವಂತಿಲ್ಲ. ಜೊತೆಗೆ ಹೆಚ್ಚು ನೀರು ಕುಡಿಯುವಂತಿಲ್ಲ. ಒಂದು ವೇಳೆ ನೀರು ಕುಡಿದರೆ ಶೌಚಾಲಯಕ್ಕೆ ಹೋಗಬೇಕಾಗುತ್ತೆ ಅನ್ನೋ ಕಾರಣಕ್ಕೆ ಅದೆಷ್ಟೋ ಬಾರಿ ಹಲವು ಡೈಪರ್ ಬಳಸಿದ್ದು ಇದೆ ಎಂದು ಕೊರೊನಾ ಚಿಕಿತ್ಸೆಯ ಕಷ್ಟದ ಸನ್ನಿವೇಶವನ್ನು ವಿವರಿಸುತ್ತಾರೆ.
ಇಷ್ಟೆಲ್ಲ ಕಷ್ಟಗಳ ನಡುವೆ ಅದನ್ನು ಬಳಸಿದ ನಂತರ ವಿಲೇವಾರಿ ಮಾಡುವುದು ದೊಡ್ಡ ಸಾಹಸದ ಕೆಲಸ. ಯಾಕೆಂದರೆ ಇದರಿಂದ ಇತರರಿಗೆ ಸೋಂಕು ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತೆ. ಕೊರೊನಾ ವಾರಿಯರ್ಸ್ ಬಳಸಿದ ನಂತರದ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕವಾಗಿ ಪೌರಕಾರ್ಮಿಕರನ್ನು ನಿಯೋಜಿಸಬೇಕು. ಈ ಕಾರ್ಮಿಕರು ಪಿಪಿಇ ಕಿಟ್ ಧರಿಸುವುದು ಸೇರಿದಂತೆ ಸುರಕ್ಷತೆ ಕ್ರಮಗಳನ್ನು ಪಾಲಿಸಬೇಕು. ರಾಜ್ಯದ ಆಸ್ಪತ್ರೆಗಳಲ್ಲಿ ದಾಖಲಾದ ಕೊರೊನಾ ಸೋಂಕಿತರಿಂದ ಉತ್ಪತ್ತಿಯಾಗುತ್ತಿರುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸಿದೆ.
ಕೊರೊನಾ ರೋಗಿಗಳು ಹಾಗೂ ಕ್ವಾರಂಟೈನ್‌ನಲ್ಲಿ ಇರುವವರಿಗೆ ಸಂಬಂಧಿಸಿದ ತ್ಯಾಜ್ಯವನ್ನು ಅಂದರೆ ಬಟ್ಟೆ, ಟಿಶ್ಯೂ, ಬಳಸಿ ಬಿಸಾಡುವ ತಟ್ಟೆ ಇತ್ಯಾದಿ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕೆಂದು ಸೂಚಿಸಲಾಗಿದೆ. ಈ ಹೊಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ನಿಯೋಜಿಸಿದ ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ.
ನಾಲ್ಕು ಬಣ್ಣದ ಚೀಲದಲ್ಲಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ
ನಾಲ್ಕು ಬಣ್ಣದ ಚೀಲದಲ್ಲಿ ತ್ಯಾಜ್ಯ ಸಂಗ್ರಹಿಸಬೇಕು. ನೀಲಿ, ಹಳದಿ, ಬಿಳಿ, ಕೆಂಪು ಬಣ್ಣಗಳೆಂದು ಪ್ರತ್ಯೇಕಿಸಲಾಗಿದೆ. ಯಾವ ಬಣ್ಣದ ಚೀಲಿದಲ್ಲಿ ಯಾವ ತ್ಯಾಜ್ಯ ಹಾಕಬೇಕು ಅಥವಾ ಸಂಗ್ರಹಿಸಬೇಕು ಎಂಬುದು ಬಣ್ಣ ಸೂಚಿಸುತ್ತದೆ. ನೀಲಿ ಬಣ್ಣದ ಚೀಲದಲ್ಲಿ ಗಾಜಿನ ಕಸ, ಒಡೆದ ಟ್ಯೂಬ್ ಲೈಟ್‌ಗಳನ್ನು ಸಂಗ್ರಹಿಸಬೇಕು. ಹಳದಿ ಬಣ್ಣದ ಚೀಲದಲ್ಲಿ ಬಳಸಿದ ಹತ್ತಿ, ಡ್ರೆಸ್ಸಿಂಗ್ಸ್, ಮಾಸ್ಕ್, ಸ್ವಾಬ್ ಸ್ಟಿಕ್ ಮತ್ತು ಮಾತ್ರೆಗಳು. ಕೆಂಪು ಬಣ್ಣದ ಚೀಲದಲ್ಲಿ ಕನ್ನಡಕ, ಫೇಸ್ ಶೀಲ್ಡ್, ಏಪ್ರನ್, ಪ್ಲಾಸ್ಟಿಕ್ ಪ್ಲೇಟ್‌ಗಳು ಹಾಗೂ ಬಿಳಿ ಬಣ್ಣದ ಚೀಲದಲ್ಲಿ ಸೂಜಿ, ಇನ್ಸುಲಿನ್ ಸಿರಿಂಜ್ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಬೇಕಾಗುತ್ತದೆ.
ಇನ್ನು ಇದನ್ನ ವಿಲೇವಾರಿ ಮಾಡಬೇಕಾದರೆ ಕಸ ಸಂಗ್ರಹಿಸುವ ವಾಹನ ಚೀಲದ ಮೇಲೆ ‘ಕೋವಿಡ್-19’ ಎಂದು ಬರೆದಿರಬೇಕು. ಈ ಕಸವನ್ನು ಬೇರೆ ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯದೊಂದಿಗೆ ಬೆರೆಸುವಂತಿಲ್ಲ. ಕ್ವಾರಂಟೈನ್ ಕೇಂದ್ರಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವಾಹನ ಬಳಸಬೇಕು. ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಪಿಪಿಇ ಧರಿಸಬೇಕು. ಪ್ರತಿ ಆಸ್ಪತ್ರೆಗಳು ತಮ್ಮ ಐಸೋಲೇಶನ್ ವಾರ್ಡ್ನ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಈ ಬಗ್ಗೆ ಸರಿಯಾದ ದಾಖಲೆ ಇಡಬೇಕು. ಕಸ ಸಂಗ್ರಹಿಸಿದ ಬಳಿಕ ಆ ಚೀಲಗಳ ಮೇಲೆ ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಬೇಕು. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನ ತಡೆಯುವುದಷ್ಟೇ ಅಲ್ಲದೇ, ಬಳಿಸಿದ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಬಹಳ ಮುಖ್ಯವಾಗಿದೆ.