ಬೆಂಗಳೂರು : ಪ್ರಾಣದ ಹಂಗು ತೊರೆದು ಹೋರಾಡಿದ ಕೀರ್ತಿ ಮತ್ತು ನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಪೊಲೀಸರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಹುತಾತ್ಮ ದಿನದ ನಿಮಿತ್ತ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ಮರಣಾಂಜಲಿ ಪೊಲೀಸ್ ಅಮರ ವೀರರ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಪ್ರೋತ್ಸಾಹಧನಕ್ಕಿಂತ ಮುಖ್ಯವಾಗಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಬೆಂಬಲದ ಅಗತ್ಯವಿದೆ. ಪೊಲೀಸರ ಕಾರ್ಯವ್ಯಾಪ್ತಿ ಬದಲಾಗುತ್ತಿರುವ ಜೀವನ ಕ್ರಮಕ್ಕನುಗುಣವಾಗಿ ಹೆಚ್ಚಾಗುತ್ತಿದ್ದು, ಹೊಸ ತಂತ್ರಜ್ಞಾನದ ಕಲಿಕೆ ಅವಶ್ಯಕವಾಗಿದೆ. ಅದಕ್ಕಾಗಿ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲು ಯೋಚಿಸಲಾಗಿದೆ. ಪೊಲೀಸರ ಸುರಕ್ಷತೆ, ಜೀವ ಮತ್ತು ಜೀವನ ಕಟ್ಟಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮುಖ್ಯವಾಗಿ ಅವರ ಆರೋಗ್ಯ ಕಾಪಾಡುವುದಕ್ಕಾಗಿ ಹೊಸ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಯಾವುದೇ ಪೊಲೀಸರಿಗೆ ತೊಂದರೆಯಾದರೆ ಅವರನ್ನು ಬೆಂಬಲಿಸುವ ಮತ್ತು ಮಾನಸಿಕ ಧೈರ್ಯ ತುಂಬುವ ಕೆಲಸ ಇಲಾಖೆಯಲ್ಲಿ ಆಗುತ್ತಿರುವುದನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ, ಇದು ಹೀಗೆ ಇರಲಿ. ಈ ತರಹದ ಬಂಧನ, ಸಂಬಂಧಗಳನ್ನು ಸಂಭ್ರಮಿಸುವುದು ಪೊಲೀಸ್ ಇಲಾಖೆಯ ಹೃದಯ ಶ್ರೀಮಂತಿಕೆ ತೋರಿಸುತ್ತದೆ. ಯಾರು ಕಠಿಣವಾಗಿರುತ್ತಾರೆ ಅವರ ಹೃದಯ ಅತ್ಯಂತ ಮೆದುವಾಗಿರುತ್ತದೆ. ಒಬ್ಬ ಅಶಾ ಕಾರ್ಯಕರ್ತೆಗೆ ರಕ್ಷಣೆ ನೀಡುವುದು, ರೋಗಿಯನ್ನು ಆಸ್ಪತ್ರೆಗೆ ಸೇರಿಸುವುದರಿಂದ ಹಿಡಿದು, ಗಲಾಟೆಗಳ ನಿಯಂತ್ರಣದವರೆಗೆ ಅತ್ಯಂತ ಮಹತ್ವದ ಜವಾಬ್ದಾರಿಗಳನ್ನು ಕೋವಿಡ್ ಸಂದರ್ಭದಲ್ಲಿ ಪೊಲೀಸರು ನಿರ್ವಹಿಸಿದ್ದಾರೆ ಎಂದರು.
ಧಣಿವರಿಯದೇ ಹಗಲು ರಾತ್ರಿ ಶ್ರಮ ಜೀವಿಗಳಂತೆ ಪೊಲೀಸರು ದುಡಿಯುತ್ತಾರೆ. ಅನೇಕ ಸಲ ಪ್ರಯಾಣ ಮಾಡುವ ಸಂದರ್ಭಗಳಲ್ಲಿ ನಡು ರಾತ್ರಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡಿದ್ದೇನೆ. ಅವರ ಜೀವನವನ್ನು ಉತ್ತಮಗೊಳಿಸಲು ಸರ್ಕಾರ ಬದ್ಧವಾಗಿದೆ. ಇಂತಹ ಸ್ಮರಣೆಗಳಿಗಿಂತ ಪೊಲೀಸರ ಮಕ್ಕಳ ಶಿಕ್ಷಣ ಆರೋಗ್ಯ ಸೇರಿದಂತೆ ಉತ್ತಮ ಜೀವನ ನಡೆಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ. ಸಾಮಾನ್ಯರು ತಮ್ಮ ಅಸಾಮಾನ್ಯ ತ್ಯಾಗ ಬಲಿದಾನಗಳಿಂದ ಅಮರ ವೀರರಾಗುತ್ತಾರೆ. ಅಂತಹ ಸನ್ನಿವೇಶಗಳ ಪ್ರದರ್ಶನವನ್ನು ಹಮ್ಮಿಕೊಳ್ಳುವ ಮೂಲಕ ಶೌರ್ಯ ಮೆರೆದು ಇಲಾಖೆಗೆ ಹೆಸರು ತಂದುಕೊಟ್ಟವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.