ಬೆಂಗಳೂರು : ಸಿಲಿಕಾನ್ ಸಿಟಿಯ ಇಂದಿರಾನಗರದಲ್ಲಿನ ಅಕ್ರಮ ಕ್ಯಾಸಿನೋ ಮೇಲೆ ದಾಳಿ ನಡೆಸಿರುವ ಪೊಲೀಸರು 27 ಜನರನ್ನು ಬಂಧಿಸಿ, ಮೂರು ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.
ಇಂದಿರಾನಗರದಲ್ಲಿ ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನ, ಚಲಘಟ್ಟ ಚಂದ್ರ, ಮಲಯಾಳಿ ಮುರಳಿ ಎನ್ನುವವರ ಪಾಲುದಾರಿಕೆಯಲ್ಲಿ ಆಗಸ್ಟ್ 5ರಂದು ಕ್ಯಾಸಿನೋ ಶುರುವಾಗಿತ್ತು. ರೋಲೆಟ್, ಅಂದರ್ ಬಾಹರ್, ಎಲೆಕ್ಟ್ರಾನಿಕ್ ಪೋಕರ್, ಪಿನ್ ಬಾಲ್ ಸೇರಿದಂತೆ ಹಲವು ರೀತಿಯ ಕಾನೂನು ಬಾಹಿರ ಜೂಜು ಇಲ್ಲಿ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಮೇರೆಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದ ತಂಡವು ದಾಳಿ ನಡೆಸಿದೆ.
ಆಂಧ್ರ ಮೂಲದ ಹಲವು ಶ್ರೀಮಂತರು, ರೌಡಿಗಳು ಕ್ಯಾಸಿನೋದಲ್ಲಿ ಜೂಜು ಕಟ್ಟಲು ಬಂದಿದ್ದರು ಎನ್ನಲಾಗಿದೆ. ರಾತ್ರಿ 11 ಗಂಟೆ ಬಳಿಕವೂ ದಾಳಿ ಮುಂದುವರೆದಿದ್ದು, ಬಂಧಿತರ ವಿಚಾರಣೆ ತೀವ್ರಗೊಳಿಸಲಾಗಿದೆ.
ಬೆಂಗಳೂರು ನಗರದಲ್ಲಿ ಕಳೆದ ಎರಡು ವರ್ಷಗಳಿಂದ ಕ್ಯಾಸಿನೋ ತೆರೆಯಲು ಯಾರಿಗೂ ಅವಕಾಶ ಮತ್ತು ಅನುಮತಿ ಇರಲಿಲ್ಲ. ಆದರೆ, ಆ. 5ರಂದು ಬಾಗಿಲು ತೆರೆದ ಕ್ಯಾಸಿನೋಗೆ ಅನುಮತಿ ಕೊಟ್ಟಿದ್ದು ಯಾರು ಎಂದು ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.