ಬೆಂಗಳೂರು: ನಗರದ ಜನರನ್ನು ಬೆದರಿಸಿ ರೌಡಿಗಳು ಅವರಿಂದ ಹಣ ಸುಲಿಗೆ ಮಾಡುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ರೌಡಿಗಳು ಮಾತ್ರವಲ್ಲ, ಯಾವುದೋ ಸಂಘಟನೆ ಹೆಸರು ಹೇಳಿಕೊಂಡು ಕೆಲ ಖದೀಮರು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಅಂತಹದ್ದೇ ಘಟನೆ ನಗರದಲ್ಲಿ ನಡೆದಿದೆ.
ಸಂಘಟನೆಯ ಹೆಸರಲ್ಲಿ ಸರ್ಕಾರಿ ವೈದ್ಯನನ್ನು ಬೆದರಿಸಿ ರೋಲ್ ಕಾಲ್ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ. ಜೈ ಭಾರತ ಸೇನೆಯ ಅಧ್ಯಕ್ಷ ಪ್ರದೀಪ್ ಎಂಬಾತ ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ:
ಎಪಿಡಮಿಕ್ ಡಿಸೀಸ್ ಹಾಸ್ಪಿಟಲ್ ಡಿಸ್ಟ್ರಿಕ್ಟ್ ಸರ್ಜನ್ ಅನ್ಸರ್ ಅಹಮ್ಮದ್ ಎಂಬವರು ತಮಗೆ ರೋಲ್ ಕಾಲ್ ಮಾಡಿದ್ದ ಹಿನ್ನೆಲೆಯಲ್ಲಿ ದೂರು ನೀಡಿದ್ದರು. ಈ ಮೊದಲು ಮಧುಗಿರಿಯ ಗೋಪಾಲ್ ಎಂಬಾತ ಟೆಟಾನಸ್ ಕಾಯಿಲೆಯಿಂದ ಇಂದಿರಾನಗರದ ಇಡಿಎಚ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಇನ್ನು ಚಿಕಿತ್ಸೆಗೆಂದು ಈತ 3,500 ರೂಪಾಯಿ ಪಾವತಿಸಿದ್ದ. ಇನ್ನುಳಿದ 10 ಸಾವಿರದಷ್ಟು ಹಣವನ್ನು ಪಾವತಿಸಲು ಗೋಪಾಲ್ ನಿರಾಕರಿಸಿದ್ದಾನೆ. ಆದರೆ ಇದೇ ವಿಚಾರವನ್ನು ಆಧಾರವಾಗಿ ಇಟ್ಟುಕೊಂಡು ಆರೋಪಿ ಪ್ರದೀಪ್ ವೈದ್ಯರ ವಿಡಿಯೋ ಮಾಡಿ, ರೋಗಿಯ ಬಳಿ ಹಣ ಡಿಮಾಂಡ್ ಮಾಡಿದ್ದೀರಿ ಎಂದು ಬೆದರಿಸಿದ್ದಾನೆ. ಅಷ್ಟೇ ಅಲ್ಲದೆ ವೈದ್ಯ ಅನ್ಸರ್ ಅಹಮ್ಮದ್‌ರನ್ನ ಕೆಲಸದಿಂದ ಎತ್ತಂಗಡಿ ಮಾಡೋದಾಗೂ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ವಿಡಿಯೋವನ್ನು ವೈರಲ್ ಮಾಡುತ್ತೇನೆ. ಇಲ್ಲವಾದರೆ ಲಂಚ ನೀಡಬೇಕು ಎಂದು ಆವಾಜ್ ಹಾಕಿದ್ದಾನೆ ಅಂತ ದೂರಿನಲ್ಲಿ ಅನ್ಸರ್ ಉಲ್ಲೇಖಿಸಿದ್ದಾರೆ.
ಈತನ ಬೆದರಿಕೆಯಿಂದ ಬೇಸತ್ತ ವೈದ್ಯ ಅಹ್ಮದ್ ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಪ್ರದೀಪ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈತನ ವಿರುದ್ಧ ಐಪಿಸಿ ಸೆಕ್ಷನ್ 384(ಬೆದರಿಕೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯನಿಗೆ ಬೆದರಿಕೆ ಹಾಕಲು ಬಳಸಿದ್ದ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ.