ಬೆಂಗಳೂರು : ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನಲ್ ಟ್ರಸ್ಟ್ (ಆಸೆಟ್)ನ ಕನಸಿನ ಯೋಜನೆಯಾದ ವಿಶ್ವಕರ್ಮ ಯುನಿವರ್ಸಿಟಿಯ ಸಾಕಾರಕ್ಕೆ ಜಮೀನು ಮತ್ತು 10 ಕೋಟಿ ರೂ.ವಿಶೇಷ ಅನುದಾನ ಮಂಜೂರಿಗೆ ಮನವಿ ಮಾಡಲಾಗಿದೆ.
ವಿಶ್ವಕರ್ಮ ವಿವಿ ಸಲಹಾ ಮಂಡಳಿ ಮಾರ್ಗದರ್ಶಕ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ಗೆ ಸಾಹಿತಿ ಚಂದ್ರಶೇಖರ ಕಂಬಾರ ಭೇಟಿ ನೀಡಿ ಈ ಕುರಿತು ಚರ್ಚೆ ನಡೆಸಿದ್ದಾರೆ. ವಿಶ್ವಕರ್ಮ ವಿವಿ ಕುರಿತು ಕೆಲಕಾಲ ಸಮಾಲೋಚನೆ ನಡೆಸಿದರು.
ಆನೆಗುಂದಿ ಮಹಾಸಂಸ್ಥಾನದ ವತಿಯಿಂದ ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನಲ್ (ಆಸೆಟ್) ಎನ್ನುವ ಶೈಕ್ಷಣಿಕ ಟ್ರಸ್ಟ್‌ನ್ನು ನೋಂದಣಿ ಮಾಡಲಾಗಿದೆ. ವಿಶ್ವಕರ್ಮ ಯುನಿವರ್ಸಿಟಿಯನ್ನು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಿಸುವ ಇರಾದೆ ಇದೆ ಎಂಬ ಮನವಿ ಮುಂದಿಟ್ಟಿದ್ದಾರೆ.
ಪಂಚಶಿಲ್ಪ ಕಲಿಕೆಗೆ ವಿವಿ ಒತ್ತು
ಪಂಚ ಶಿಲ್ಪಗಳಾದ ಲೋಹ ಶಿಲ್ಪಶಾಸ್ತ್ರ, ಕಾಷ್ಠ ಶಿಲ್ಪಶಾಸ್ತ್ರ, ಕಂಚು ಶಿಲ್ಪಶಾಸ್ತ್ರ, ಶಿಲಾ ಶಿಲ್ಪಶಾಸ್ತ್ರ ಮತ್ತು ಸ್ವರ್ಣ ಶಿಲ್ಪಶಾಸ್ತ್ರ ಎಂಬ ವಿಶ್ವಕರ್ಮ ಸಮಾಜದ ವೃತ್ತಿಗಳ ಅಧ್ಯಯನ, ಸಂಶೋಧನೆ, ನಾವೀನ್ಯತೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಮಹತ್ತರ ಉದ್ದೇಶವೂ ವಿವಿಗಿದೆ. ಪಾರಂಪರಿಕ ಜ್ಞಾನವನ್ನು ಆಧುನಿಕ ತಂತ್ರಜ್ಞಾನದ ಜತೆ ಸಂಲಗ್ನಗೊಳಿಸುವ ಮೂಲಕ ಕೌಶಲ್ಯ ಭಾರತದ ಹೊಸ ಅಧ್ಯಾಯ ತೆರೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ವಿಶ್ವಕರ್ಮ ಯುನಿವರ್ಸಿಟಿಯ ಪ್ರಾರಂಭಕ್ಕೆ ಇದೀಗ ಆನೆಗುಂದಿ ಮಹಾಸಂಸ್ಥಾನವಿರುವ ಉಡುಪಿ ಜಿಲ್ಲೆಯ ಕುತ್ಯಾರು ಗ್ರಾಮದ ರಿ.ಸ 121, 201ರಲ್ಲಿ 10 ಎಕರೆ ಜಮೀನು ಹೊಂದಿದೆ. ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 10 ಕೋಟಿ ರೂಪಾಯಿಯ ವಿಶೇಷ ಅನುದಾನ ಮಂಜೂರು ಮಾಡುವ ಮೂಲಕ ಆಸೆಟ್‌ನ ಕಾರ್ಯಯೋಜನೆಗಳನ್ನು ಸಾಕಾರಗೊಳಿಸಬೇಕೆಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ