ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಮೂಲಕ ಪಕ್ಷದ ಪರ ಮತ ಯಾಚನೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಬೆಂಗಳೂರಿಗೆ ವಿಶೇಷ ಗಮನ ನೀಡಿದ್ದಾರೆ. ಕಳೆದ ದಿನ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ್ದ ಪ್ರಧಾನಿ ಮೋದಿ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಪ್ರಚಾರ ನಡೆಸಲು ಮತ್ತೆ ಎರಡು ಬಾರಿ ಸಿಲಿಕಾನ್ ಸಿಟಿಗೆ ಆಗಮಿಸುತ್ತಿದ್ದಾರೆ.
ಶನಿವಾರದಂದು ರಾಜ್ಯ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಿದರು. ನೈಸ್ ರೋಡ್ ಜಂಕ್ಷನ್ನಿಂದ ಸುಮನಳ್ಳಿ ಸರ್ಕಲ್ವರೆಗೂ 5.3 ಕಿಲೋ ಮೀಟರ್ವರೆಗೂ ನಡೆದ ರೋಡ್ ಶೋ ಯಶವಂತಪುರ, ಆರ್.ಆರ್. ನಗರ, ದಾಸರಹಳ್ಳಿ ಹಾಗು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾಗಿತು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 9 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಈ ರೋಡ್ ಶೋನಲ್ಲಿ ಭಾಗವಹಿಸಿದ್ದರು. ತೆರೆದ ವಾಹನದಲ್ಲಿ ತೆರಳಿದ ಮೋದಿ ರೋಡ್ ಶೋ ಮುಕ್ತಾಯದ ಸ್ಥಳದಲ್ಲಿ ವಾಹನದಿಂದ ಕೆಳಗಿಳಿದು ರಸ್ತೆಯಲ್ಲಿ ನಡೆದು ಕಾರ್ಯಕರ್ತರು, ಅಭಿಮಾನಿಗಳತ್ತ ಕೈಬೀಸುತ್ತಾ ಸಾಗಿ ಗಮನ ಸೆಳೆದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮುಕ್ತಾಯಗೊಂಡಿತು.
ಮೇ 6ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ. ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ ಕ್ಷೇತ್ರಗಳ ಕಾರ್ಯಕರ್ತರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ ಮೇ 7ರಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ: ಮೋದಿಗೂ ಮುನ್ನ ಚನ್ನಪಟ್ಟಣಕ್ಕೆ ಆಗಮಿಸಿದ ಮಾಜಿ ಪ್ರಧಾನಿ : ಕುಮಾರಸ್ವಾಮಿ ಪರ ಹೆಚ್ಡಿಡಿ ಮತಯಾಚನೆ
ಸರ್ವಜ್ಞನಗರ, ಸಿವಿ ರಾಮನ್ ನಗರ, ಶಿವಾಜಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ ಕ್ಷೇತ್ರಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೋದಿ ಪಾಲ್ಗೊಳ್ಳಲಿರುವ ಕಡೆಯ ಕಾರ್ಯಕ್ರಮ ಇದಾಗಿದೆ. ರೋಡ್ ಶೋ ಹಾಗು ಸಾರ್ವಜನಿಕ ಸಭೆಗೆ ಯೋಜನೆ ರೂಪಿಸಲಾಗಿದೆ.
ಇಂದು ಕೋಲಾರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಕೆಂದಟ್ಟಿಯಲ್ಲಿ ಬೃಹತ್ ಸಮಾವೇಶ ಆಯೋಜನೆಗೊಂಡಿದ್ದು, ಮತದಾರರನ್ನು ಪ್ರಧಾನಿ ಮೋದಿ ತಮ್ಮತ್ತ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: 'ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ': ನಟ ದತ್ತಣ್ಣ ಸೇರಿ ಸೆಲೆಬ್ರಿಟಿಗಳಿಂದ ಮನವಿ
ಇನ್ನು ಪ್ರಧಾನಿ ನಡೆಸಿಕೊಡುವ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮ ಶತಕದ ಸಂಭ್ರಮದಲ್ಲಿದೆ. ಇಂದು 100 ಕಾರ್ಯಕ್ರಮಗಳನ್ನು ಪೂರೈಸಿದೆ ಮನ್ ಕಿ ಬಾತ್. ಜನರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.