ಬೆಂಗಳೂರು : ಮೈಸೂರಿನಲ್ಲಿ ಕೊರೊನಾ ಸೋಂಕು ಹರಡಲು ಕಾರಣವಾಗಿರುವ ನಂಜನಗೂಡಿನ ಜುಬ್ಲಿಯಂಟ್ಜನರಿಕ್ಸ್ ಕಂಪನಿ ಲಿಮಿಟೆಡ್‌ನ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.
![Petition to High Court against Jubilent company](https://etvbharatimages.akamaized.net/etvbharat/prod-images/kn-bng-04-hc-corona-ia-7208962_08042020190952_0804f_1586353192_1101.jpg)
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಗೀತಾ ಮಿಶ್ರಾ ಅವರು ಈ ಅರ್ಜಿ ಸಲ್ಲಿಸಿದ್ದು, ಜುಬ್ಲಿಯಂಟ್ ಕಂಪನಿ ನಿರ್ಲಕ್ಷ್ಯದಿಂದಲೇ ನಂಜನಗೂಡು, ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹರಡಿದೆ. ಆದ್ದರಿಂದ ಕಂಪನಿ ಮಾಲೀಕರ ವಿರುದ್ಧ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಜುಬ್ಲಿಯಂಟ್ ಸಂಸ್ಥೆಯ ಯಾವುದೇ ನೌಕರನು ವಿದೇಶಕ್ಕೆ ತೆರಳಿಲ್ಲ, ವಿದೇಶದಿಂದ ಹಿಂದಿರುಗಿದವರ ಸಂಪರ್ಕವನ್ನೂ ಹೊಂದಿಲ್ಲ. ಹೀಗಿದ್ದೂ ಕಂಪನಿಯ ನೌಕರರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಆ ವ್ಯಕ್ತಿಯಿಂದಲೇ ಸಂಸ್ಥೆಯ ಇತರ ನೌಕರರಿಗೂ ಸೋಂಕು ಹರಡಿದೆ. ಜುಬ್ಲಿಯಂಟ್ ಕಂಪನಿಗೆ ಚೀನಾದಿಂದ ಹವಾನಿಯಂತ್ರಿತ ಟ್ರಕ್ ಮೂಲಕ ಕೆಲವೊಂದು ರಾಸಾಯನಿಕ ವಸ್ತುಗಳನ್ನು ಆಮದು ಮಾಡಿಕೊಂಡಿರುವ ಮಾಹಿತಿ ಇದೆ. ಇದರಿಂದಲೇ ಕೊರೊನಾ ಹಬ್ಬಿರುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರದ ಯಾವುದೇ ಪ್ರಾಧಿಕಾರವೂ ಸಂಸ್ಥೆಯ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಏ.6ರಂದು ಮನವಿ ಸಲ್ಲಿಸಲಾಗಿದೆ. ಆ ಮನವಿ ಪರಿಗಣಿಸಿ, ಪ್ರಕರಣದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಗೀತಾ ಮಿಶ್ರಾ ಅರ್ಜಿಯಲ್ಲಿ ಕೋರಿದ್ದಾರೆ.