ಬೆಂಗಳೂರು : ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ. 4 ಮೀಸಲಾತಿ ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ವಕೀಲ ಮಹಮ್ಮದ್ ಇಕ್ಬಾಲ್ ಎಂಬವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ ಎಂ.ಜಿ.ಎಸ್ ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲ ಸಿ.ಎಸ್. ದ್ವಾರಕಾನಾಥ್, ಪ್ರಾಥಮಿಕ ವಾದ ಮಂಡಿಸಿ ಪ್ರಕರಣವನ್ನು ವಿವರಿಸಿದರು. ಆಗ, ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಕಾರಣ ಯಾವುದೇ ನಿರ್ದೇಶನ ಅಥವಾ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಮೀಸಲಾತಿ ರದ್ದುಪಡಿಸಿರುವುದು ಕರ್ನಾಟಕ ಸರ್ಕಾರ. ಇದರಿಂದ ಬಾಧಿತರಾದವರು ಕರ್ನಾಟಕದ ಮುಸ್ಲಿಂ ಸಮುದಾಯ. ಈ ಪ್ರಕರಣ ರಾಜ್ಯ ಹೈಕೋರ್ಟ್‌ನ ನ್ಯಾಯವ್ಯಾಪ್ತಿಗೆ ಬರುತ್ತದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು. ಆದರೂ, ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅಲ್ಲಿನ ಬೆಳವಣಿಗೆಗಳನ್ನು ಆಧರಿಸಿ ಮುಂದೆ ಪರಿಶೀಲಿಸಲಬಹುದು ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು 10 ವಾರಗಳ ಕಾಲ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಮುಸ್ಲಿಮರಿಗೆ ಮೀಸಲಾತಿ ರದ್ದುಪಡಿಸಿದ ರಾಜ್ಯ ಸರ್ಕಾರದ ಕ್ರಮ ಏಕಪಕ್ಷೀಯ ಹಾಗೂ ಮೀಸಲಾತಿ ಪಡೆಯುತ್ತಿದ್ದ ಸಮುದಾಯಕ್ಕೆ ತೊಂದರೆ ಮಾಡಿದೆ. ಸರ್ಕಾರದ ಈ ನಿರ್ಧಾರ ಸಂವಿಧಾನದ ಕಲಂ 14, 15 ಹಾಗೂ 16ರ ಆಶಯಗಳಿಗೆ ವಿರುದ್ಧವಾಗಿದೆ. ಮೀಸಲಾತಿ ರದ್ದತಿಯಿಂದ ಮುಸ್ಲಿಂ ಸಮುದಾಯದ ಶಿಕ್ಷಣ ಮತ್ತು ಉದ್ಯೋಗದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಮುಸ್ಲಿಮರು ಶೇ.4 ಮೀಸಲಾತಿಯನ್ನು ರದ್ದುಪಡಿಸಿ 2022ರ ಮಾ. 27ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಜಿ.ಪಂ, ತಾ.ಪಂ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿ: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಎರಡೂವರೆ ತಿಂಗಳು (10 ವಾರ) ಕಾಲಾವಕಾಶ ಕೇಳಿದೆ. ಅವಧಿ ಮುಗಿದ ಜಿ. ಪಂ. ತಾ.ಪಂಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ರಾಜ್ಯದಲ್ಲಿ ತಾ.ಪಂ. ಜಿ.ಪಂ. ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಹಾಜರಾಗಿ, ಜಿ.ಪಂ-ತಾ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಆಗಿತ್ತು. ಆದರೆ, ಕೆಲವು ಆಕ್ಷೇಪಣೆಗಳು ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯನ್ನು ಮರು ನಿಗದಿ (ರೀಡೂ) ಮಾಡಬೇಕಾಗಿದೆ. ಅದಾದ ಬಳಿಕ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಬೇಕಾಗುತ್ತದೆ. ಹಾಗಾಗಿ, ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು 10 ವಾರಗಳ ಕಾಲಾವಕಾಶ ಬೇಕೆಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು 10 ವಾರಗಳಲ್ಲಿ ಪೂರ್ಣಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಅದಾದ ಬಳಿಕ ಮುಂದಿನ ಪ್ರಕ್ರಿಯೆನ್ನು ರಾಜ್ಯ ಚುನಾವಣಾ ಆಯೋಗ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು 12 ವಾರಗಳ ಕಾಲ ಮುಂದೂಡಿತು.
ಇದನ್ನೂ ಓದಿ: High Court: ವಿದ್ಯಾರ್ಥಿಗಳ ಮೇಲೆ ಕಠಿಣ ಶಿಸ್ತು ಕ್ರಮ ಪರಿಶೀಲಿಸಲು ಹೈಕೋರ್ಟ್ ಸೂಚನೆ