ಬೆಂಗಳೂರು : ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟ ಪ್ರಕರಣದಲ್ಲಿ ಪೊಲೀಸರ ಕ್ರಮ ವಿರೋಧಿಸಿ ಮೃತರ ಮನೆ ಮುಂದೆ ಪ್ರತಿಭಟಿಸುತ್ತಿದ್ದ ಸ್ಥಳೀಯರು ಹಾಗೂ ಇನ್ಸ್ಪೆಕ್ಟರ್ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ನಡೆದಿದೆ. ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡದ ಕೋಣನಕುಂಟೆ ಠಾಣಾ ಪೊಲೀಸರು ಸೆಕ್ಯುರಿಟಿ ಗಾರ್ಡ್ನ ಬಂಧಿಸುವ ಮೂಲಕ ಆರೋಪಿಗಳ ಪರ ಇದ್ದಾರೆ ಎಂದು ಸ್ವಿಮ್ಮಿಂಗ್ ಪೂಲ್ ಮುಂದೆ ಪ್ರತಿಭಟಿಸಲು ಮುಂದಾದಾಗ ಬಾಲಕರ ಕಡೆಯವರು ಹಾಗೂ ಕೋಣನಕುಂಟೆ ಠಾಣಾ ಇನ್ಸ್ಪೆಕ್ಟರ್ ಶಿವಕುಮಾರ್ ನಡುವೆ ವಾಗ್ವಾದ ನಡೆದಿದೆ. 'ನಾನಿರುವುದೇ ಪರಿಸ್ಥಿತಿ ನಿಯಂತ್ರಣಕ್ಕೆ, ನಮ್ಮ ವ್ಯಾಪ್ತಿಗೆ ಮೃತದೇಹಗಳನ್ನ ತರಬೇಡಿ' ಎಂದು ಇನ್ಸ್ಪೆಕ್ಟರ್ ಹೇಳಿದಾಗ ಮೃತ ಬಾಲಕರ ಕಡೆಯವರು ಧಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಜರಗನಹಳ್ಳಿ ಬಾಲಕರ ಮನೆ ಮುಂದೆ ಇಬ್ಬರೂ ಬಾಲಕರ ಮೃತದೇಹ ಇಟ್ಟು ಪ್ರತಿಭಟನೆ ಮಾಡಲಾಗಿದ್ದು, ಮಕ್ಕಳ ಸಾವಿಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಸತೀಶ್ ರೆಡ್ಡಿ ಮೃತರ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ. ಈಜಲು ತೆರಳಿದ್ದ ಜಯಂತ್ (13) ಹಾಗೂ ಮೋಹನ್ (13) ಎಂಬ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ಕೋಣನಕುಂಟೆ ಠಾಣಾ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ನಗರದ ಎಂಎನ್ಸಿ ಅಕಾಡೆಮಿಯಲ್ಲಿ ನಡೆದಿತ್ತು.
ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಇಬ್ಬರು ಯುವಕರು ಮೃತ (ಚಿಕ್ಕಮಗಳೂರು): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ನಿಲುವಾಗಿಲು ಗ್ರಾಮದ ಸುಬ್ರಮಣ್ಯ(30) ಹಾಗೂ ಸುನೀಲ್ (27) ಮೃತ ದುರ್ದೈವಿಗಳು ಎಂಬುದು ತಿಳಿದು ಬಂದಿದೆ.
ಸುಬ್ರಮಣ್ಯ ಮತ್ತು ಸುನೀಲ್ ಇಬ್ಬರು ಟ್ರ್ಯಾಕ್ಟರ್ ಚಕ್ರವನ್ನು ಬದಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಆ ಸಂದರ್ಭದಲ್ಲಿ ಜಾಕ್ ಸ್ಲಿಪ್ ಆಗಿ ಟ್ರಾಕ್ಟರ್ ಟ್ರಾಲಿ ಅಚಾನಕ್ಕಾಗಿ ಉರುಳಿದೆ. ಪರಿಣಾಮ ಇಬ್ಬರು ಟ್ರಾಲಿ ಅಡಿಗೆ ಸಿಲುಕಿಕೊಂಡು ಹೊರ ಬರಲಾಗದೇ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹರಿಹರಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಚಲಿಸುತ್ತಿದ್ದ ವೇಳೆ ರಸ್ತೆಯಲ್ಲಿನ ಜಲ್ಲಿಯಿಂದ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ (ದೇವನಹಳ್ಳಿ): ಹದೆಗೆಟ್ಟ ರಸ್ತೆಗೆ ಬೈಕ್ ಸವಾರ ಬಲಿಯಾಗಿರುವ ಘಟನೆ ದೇವನಹಳ್ಳಿ ಪಟ್ಟಣದ ವಿಜಯಪುರ ಕ್ರಾಸ್ ಬಳಿ ನಡೆದಿದೆ. ಬಾಗೇಪಲ್ಲಿ ಮೂಲದ ವೆಂಕಟೇಶ್ (30) ಮೃತ ದುರ್ದೈವಿ. ಅಂದಹಾಗೆ ಮೃತ ವೆಂಕಟೇಶ್ ದೇವನಹಳ್ಳಿ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದ. ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯ ಜಲ್ಲಿಯಲ್ಲಿ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾನೆ.
ಈ ವೇಳೆ, ಬೈಕ್ ಸವಾರ ಲಾರಿ ಚಕ್ರಕ್ಕೆ ಸಿಲುಕಿ ವೆಂಕಟೇಶ್ ಸಾವನ್ನಪ್ಪಿದ್ದಾನೆ. ಹದಗೆಟ್ಟ ರಸ್ತೆಯಿಂದಲೇ ಬೈಕ್ ಸವಾರ ಸಾವಿಗೆ ಕಾರಣ ಅಂತಾ ಸ್ಥಳೀಯರು ಹೇಳ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ರಸ್ತೆ ಹದಗೆಟ್ಟಿದ್ರೂ ಸರಿಪಡಿಸಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಮೃತನ ಶವವನ್ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಓದಿ : ಸ್ವಿಮ್ಮಿಂಗ್ ಫೂಲ್ನಲ್ಲಿ ಈಜಲು ತೆರಳಿ ಬಾಲಕರಿಬ್ಬರು ನೀರುಪಾಲು