ಬೆಂಗಳೂರು: ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ಹೊಸ ಪ್ರವರ್ಗ ರಚಿಸಿ ಮೀಸಲಾತಿ ವಿಚಾರದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜಾಣ ನಡೆ ಅನುಸರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪಂಚಮಸಾಲಿ ಸಮುದಾಯ ಮತ್ತೊಮ್ಮೆ ಸವಾಲಾಗಿ ನಿಂತಿದೆ. ಅನಿರೀಕ್ಷಿತವಾಗಿ ಎದುರಾದ ಸಂಕಷ್ಟ ಕುರಿತು ಸಚಿವ ಮುರುಗೇಶ್ ನಿರಾಣಿ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿರುವ ಸಿಎಂ, ವಚನಾನಂದ ಶ್ರೀಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಬಿಜೆಪಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಕೋವಿಡ್ ನಡುವೆಯೂ ನಡೆದ ಹೋರಾಟದಿಂದ ಹೈರಾಣಾಗಿದ್ದ ಯಡಿಯೂರಪ್ಪ ಸರ್ಕಾರ ಅಂತಿಮವಾಗಿ ಮೀಸಲಾತಿ ನೀಡುವ ಕುರಿತು ಅಧ್ಯಯನ ಸಮಿತಿ ರಚಿಸುವ ನಿರ್ಧಾರದೊಂದಿಗೆ ಅಲ್ಪ ಸಮಯದ ನಿರಾಳತೆ ಪಡೆದುಕೊಂಡಿತ್ತು ಆದರೆ ನಂತರ ಬಂದ ಬೊಮ್ಮಾಯಿ ಸರ್ಕಾರಕ್ಕೂ ಹೋರಾಟದ ಬಿಸಿ ಮುಟ್ಟಿದ್ದರಿಂದ ಪಂಚಮಸಾಲಿ ಸಮುದಾಯದ ಹೋರಾಟ ತಣಿಸಲು ಮೀಸಲಾತಿಗಾಗಿ ಪ್ರತ್ಯೇಕ ಪ್ರವರ್ಗ ರಚಿಸಿದೆ. 3ಬಿಯಲ್ಲಿದ್ದ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಡಿ ರಚಿಸಿದೆ. ಇದೇ ವೇಳೆ ರಾಜ್ಯದ ಮತ್ತೊಂದು ಪ್ರಬಲ ಒಕ್ಕಲಿಗ ಸಮುದಾಯವನ್ನು 2 ಸಿ ಪ್ರವರ್ಗಕ್ಕೆ ಸೇರಿಸಲು ತೀರ್ಮಾನಿಸಿದೆ.
ಕೇವಲ ಪಂಚಮಸಾಲಿ ಮೀಸಲಾತಿ ಕುರಿತು ನಡೆದ ಹೋರಾಟಕ್ಕೆ ಇಡೀ ಲಿಂಗಾಯತ ಸಮುದಾಯವನ್ನೇ ಪ್ರತ್ಯೇಕ ಪ್ರವರ್ಗಕ್ಕೆ ವರ್ಗಾಯಿಸಿ ಬೀಸುವ ದೊಣ್ಣೆಯಿಂದ ತಪ್ಪಿಕೊಳ್ಳುವ ಜಾಣ ನಡೆ ಅನುಸರಿಸಿದೆ. ಇದರಿಂದ ಬೆಳಗಾವಿ ಅಧಿವೇಶನದ ವೇಳೆ ವಿಧಾನಸೌಧ ಮುತ್ತಿಗೆಯಿಂದ ಆಗಬೇಕಿದ್ದ ಮುಜುಗರದಿಂದಲೂ ಪಾರಾಗಿತ್ತು. ಒಕ್ಕಲಿಗ ಸಮುದಾಯದ ವಿಚಾರದಲ್ಲಿಯೂ ಇದೇ ಜಾಣತನವನ್ನು ಸರ್ಕಾರ ತೋರಿಸಿದೆ.
ಸರ್ಕಾರಕ್ಕೆ ಮತ್ತೆ ಗಡುವು: ಸರ್ಕಾರದ ನಿರ್ಧಾರಕ್ಕೆ ಕಾದು ನೋಡುವ ತಂತ್ರ ಅನುಸರಿಸಿದ್ದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಸಮಿತಿ ಇದೀಗ ಸರ್ಕಾರದ ವಿರುದ್ಧ ಮತ್ತೆ ತಿರುಗಿ ಬಿದ್ದಿದೆ. ಸ್ಪಷ್ಟತೆ ಇಲ್ಲದ ರೀತಿ ಕೇವಲ ಪ್ರವರ್ಗ ರಚಿಸಿದೆ. ಇದರಿಂದ ನಮ್ಮ ಬೇಡಿಕೆ ಈಡೇರಿಲ್ಲ ಎಂದು ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸರ್ಕಾರಕ್ಕೆ ಮತ್ತೆ ಗಡುವು ನೀಡಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಆಧರಿಸಿ ಹೊಸ ಪ್ರವರ್ಗ ರಚಿಸಿ, ಅಂತಿಮ ವರದಿ ನಂತರ ಮೀಸಲಾತಿ ಪ್ರಮಾಣ ನಿಗದಿ ಮಾಡುವ ನಿರ್ಧಾರವನ್ನು ಸಿಎಂ ಬೊಮ್ಮಾಯಿ ಪ್ರಕಟಿಸಿದ್ದಾರೆ. ಅಂತಿಮ ವರದಿ ಬರುವ ವೇಳೆ ಚುನಾವಣೆ ಬರಲಿದೆ. ಇದರಿಂದ ಸದ್ಯಕ್ಕೆ ನಾವು ನಿರಾಳ ಎಂದುಕೊಂಡಿದ್ದರು. ಆದರೆ ಇಷ್ಟು ಬೇಗ ಮತ್ತೊಮ್ಮೆ ಹೋರಾಟ ಎದುರಾಗಲಿದೆ ಎನ್ನುವ ನಿರೀಕ್ಷೆ ಮಾಡದ ಸಿಎಂ ಇದೀಗ ಸಮುದಾಯದ ಓಲೈಕೆಗೆ ಯತ್ನಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಬಹುಸಂಖ್ಯಾತ ಸಮುದಾಯವಾಗಿದೆ. ಹಾಗಾಗಿ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ಮೀಸಲಾತಿ ಹೋರಾಟ ಬಿಸಿತುಪ್ಪವಾಗಿ ಪರಿಣಮಿಸಿದೆ. ಚುನಾವಣೆಯಲ್ಲಿ ಉತ್ತರ ನೀಡುವುದಾಗಿ ಹೋರಾಟಗಾರರು ನೀಡಿರುವ ಎಚ್ಚರಿಕೆ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ. ಮಿಷನ್ 150 ಗುರಿಯೊಂದಿಗೆ ಪಕ್ಷಕ್ಕೆ ನೆಲೆ ಇಲ್ಲದ ಹಳೆ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿಕೊಂಡಿರುವ ವೇಳೆ ಪಕ್ಷದ ಭದ್ರ ನೆಲೆಯಾದ ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿಗರ ಎಚ್ಚರಿಕೆ ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ.
ಸಿಎಂ ಸಂದೇಶ ರವಾನೆ: ಸಮುದಾಯದ ಪ್ರಮುಖ ಸಚಿವರಾದ ಮುರುಗೇಶ್ ನಿರಾಣಿಯನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಕೆಲಕಾಲ ಮಾತುಕತೆ ನಡೆಸಿದರು. ಸಮುದಾಯದ ವಿರೋಧ ಕಟ್ಟಿಕೊಂಡರೆ ಚುನಾವಣೆಯಲ್ಲಿ ವ್ಯತಿರಿಕ್ತವಾದ ಪರಿಣಾಮ ಎದುರಾಗಲಿದೆ. ಹಾಗಾಗಿ ಈ ವಿಚಾರದಲ್ಲಿ ಸರ್ಕಾರದ ನೆರವಿಗೆ ನಿಲ್ಲಬೇಕು, ಸಮುದಾಯದ ಮನವೊಲಿಕೆ ಕಾರ್ಯ ನಡೆಸಬೇಕು. ಇದಕ್ಕೆ ಪಂಚಮಸಾಲಿ ಎರಡನೇ ಪೀಠದ ವಚನಾನಂದ ಶ್ರೀಗಳ ಮೂಲಕ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಬೇಕು ಎಂದು ಸೂಚಿಸಿದ್ದಾರೆ. ಸಮುದಾಯದ ಮತ್ತೋರ್ವ ಸಚಿವ ಸಿ ಸಿ ಪಾಟೀಲ್ ಅವರಿಗೂ ಸಿಎಂ ಇದೇ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಸಿ ಸಿ ಪಾಟೀಲ್, ನಮ್ಮ ಸರ್ಕಾರ ಪಂಚಮಸಾಲಿ ಸಮುದಾಯದ ಪರ ಇದೆ. ಹಾಗಾಗಿಯೇ ಬೆಳಗಾವಿ ಅಧಿವೇಶನದ ವೇಳೆ ಹೊಸ ಪ್ರವರ್ಗ ರಚಿಸಲಾಯಿತು. ಆದಷ್ಟು ಬೇಗ ಅಂತಿಮ ವರದಿ ಪಡೆದುಕೊಂಡು ಮೀಸಲಾತಿ ಹಂಚಿಕೆ ಮಾಡಲಾಗುತ್ತದೆ. ಸಮುದಾಯದ ನಾಯಕರ ಜೊತೆಗೂ ಈ ಕುರಿತು ಮಾತುಕತೆ ನಡೆಸಲಾಗುತ್ತದೆ, ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ವಚನಾನಂದ ಶ್ರೀ ಭೇಟಿಯಾದ ಜೆಪಿ ನಡ್ಡಾ: ಇನ್ನು, ಈ ವಿಚಾರದಲ್ಲಿ ಹೈಕಮಾಂಡ್ ಕೂಡ ಎಚ್ಚರಿಕೆಯಿಂದ ಇರುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಾಗಾಗಿಯೇ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹರಿಹರಕ್ಕೆ ಭೇಟಿ ನೀಡಿ ಪಂಚಮಸಾಲಿ ಪೀಠಕ್ಕೆ ತೆರಳಿ ವಚನಾನಂದ ಶ್ರೀಗಳ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ. ಅದರ ಮೊದಲ ಹೆಜ್ಜೆಯಾಗಿ ಹೊಸ ಪ್ರವರ್ಗ ರಚಿಸಲಾಗಿದೆ, ಅಂತಿಮ ವರದಿ ಬಂದ ನಂತರ ಮೀಸಲಾತಿ ಹಂಚಿಕೆ ಮಾಡಲಾಗುತ್ತದೆ ಅಲ್ಲಿಯವರೆಗೂ ಸಹಕಾರ ನೀಡುವಂತೆ ಮನವಿ ಮಾಡಿದರು ಎನ್ನಲಾಗಿದೆ.
ಶತಾಯಗತಾಯ ಪಂಚಮಸಾಲಿ ಸಮುದಾಯ ಮನವೊಲಿಕೆ ಮಾಡಲೇಬೇಕು ಎಂದು ಹೊರಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಸಲಹೆಯನ್ನೂ ಪಡೆದುಕೊಂಡಿದ್ದಾರೆ. ಹಾವೇರಿಗೆ ತೆರಳುವ ಮುನ್ನ ಕಾವೇರಿ ನಿವಾಸಕ್ಕೆ ಬಂದ ಸಿಎಂ ಬೊಮ್ಮಾಯಿ, ಬಿಎಸ್ವೈ ಜೊತೆ ಕೆಲಕಾಲ ಮಾತುಕತೆ ನಡೆಸಿ ಅವರಿಂದ ಸಲಹೆ ಪಡೆದುಕೊಂಡರು. ಸಂದಿಗ್ಧ ಸ್ಥಿತಿಯನ್ನು ನಿರ್ವಹಣೆ ಮಾಡಲು ಸಮುದಾಯದ ಸಚಿವರ ಮೂಲಕ ಶ್ರೀಗಳ ಜೊತೆ ಮಾತುಕತೆ ನಡೆಸುವ ನಿರ್ಧಾರಕ್ಕೆ ಸಿಎಂ ಬಂದಿದ್ದಾರೆ. ಸಾಧ್ಯವಾಗದಷ್ಟು ಹೈಕಮಾಂಡ್ ನಾಯಕರನ್ನೂ ವಚನಾನಂದ ಶ್ರೀಗಳ ಭೇಟಿ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಒಟ್ಟಿನಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ಸಿಎಂ ಇದೀಗ ಮತ್ತೊಮ್ಮೆ ಎದುರಾದ ಮೀಸಲಾತಿ ಸಂಕಷ್ಟದಿಂದ ಯಾವ ರೀತಿ ಹೊರಬರಲಿದ್ದಾರೆ. ಸರ್ಕಾರ ಮತ್ತು ಪಂಚಮಸಾಲಿ ಸಮುದಾಯದ ನಡುವೆ ಸಂಘರ್ಷ ನಡೆಯುತ್ತಾ ಅಥವಾ ಸಮುದಾಯದ ಮನವೊಲಿಕೆ ಮಾಡುವಲ್ಲಿ ಸರ್ಕಾರ ಸಫಲವಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
(ಓದಿ: ರಾಜ್ಯದ ವಿವಿಧ ಮಠಗಳಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ, ಶ್ರೀಗಳೊಂದಿಗೆ ಗೌಪ್ಯ ಸಭೆ)