ಬೆಂಗಳೂರು: ಪಕ್ಷ ಸಂಘಟನೆಗೆ ಸಹಕರಿಸುವ ಶಕ್ತಿ ಯಾರಲ್ಲಿ ಇದೆಯೋ ಅವರನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪಕ್ಷ ಸಂಘಟನೆಯ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಇಂದು ನಾವು ಮೂವರು ಕಾರ್ಯಾಧ್ಯಕ್ಷರು ಸುದೀರ್ಘ ಚರ್ಚೆ ನಡೆಸಿದ್ದೇವೆ. ಪಕ್ಷದಲ್ಲಿಯೇ ಸೇವಾದಳ ಸೇರಿದಂತೆ 20 ವಿವಿಧ ಘಟಕಗಳು ಇವೆ. ಇವರನ್ನೆಲ್ಲ ಸಕ್ರಿಯಗೊಳಿಸಲು ನಾವು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.
ಇನ್ನು ಸಾಕಷ್ಟು ವಿಚಾರವಾಗಿ ಚರ್ಚಿಸಬೇಕಾಗಿದ್ದು, ಇದು ನಡೆದಿರುವುದು ಕೇವಲ ಪ್ರಾಥಮಿಕ ಚರ್ಚೆ ಎಂದು ವಿವರಿಸಿದರು. ಪಕ್ಷ ಸಂಘಟಿಸುವುದೇ ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.