ಬೆಂಗಳೂರು : ಬಿಜೆಪಿ ಬೆಂಬಲಕ್ಕೆ ನಿಂತಿರುವ ಲಿಂಗಾಯತ ಸಮುದಾಯದ ಮತ ಬ್ಯಾಂಕ್ ಸೆಳೆಯಲು ಕಾಂಗ್ರೆಸ್ ಪಕ್ಷ ''ಆಪರೇಷನ್ ಲಿಂಗಾಯತ ಲೀಡರ್ಸ್'' ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಗುರುತಿಸಿಕೊಂಡಿರುವ ನಾಯಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯತೊಡಗಿದೆ. ಬಿಜೆಪಿಯಲ್ಲಿ ಹಳೆ ಮೈಸೂರು ಭಾಗದ ಪ್ರಬಾವಿ ಲಿಂಗಾಯತ ಮುಖಂಡರಾದ ವಸತಿ ಸಚಿವ ವಿ. ಸೋಮಣ್ಣ, ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಹೊಂದಿರುವ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ನಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಶಾಸಕರು, ಮಾಜಿ ಶಾಸಕರು ಸೇರಿದಂತೆ ವಿಧಾನಸಭೆ ಕ್ಷೇತ್ರಗಳಲ್ಲಿನ ಸ್ಥಳೀಯ ಮಟ್ಟದ ನಾಯಕರಿಗೂ ಗಾಳ ಹಾಕಿ, ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದೆ.
ಕಾಂಗ್ರೆಸ್ಗೆ ಸೇರ್ಪಡೆಗೊಂಡ ಬಿಜೆಪಿ ಬೆಂಬಲಿಗರು: ಲಿಂಗಾಯತ ಮುಖಂಡರನ್ನು ಆಕರ್ಷಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ , ಕಾಂಗ್ರೆಸ್ನ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಕೆಪಿಸಿಸಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಹಾಗು ಇನ್ನಿತರ ಮುಖಂಡರುಗಳು ನಿರಂತರ ಕಸರತ್ತು ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬೆಂಬಲಿಗರಾಗಿದ್ದ ಮಾಜಿ ಶಾಸಕ ಯು ಬಿ ಬಣಕಾರ್, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಈ ಹಿಂದೆ ಕೆಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕಿರಣ್ ಕುಮಾರ್, ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರ ಆಪ್ತರಾಗಿದ್ದ ತಮ್ಮಯ್ಯ ಅವರನ್ನು ಆಪರೇಷನ್ ಲಿಂಗಾಯತ ಲೀಡರ್ಸ್ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ವಿ ಎಸ್ ಪಾಟೀಲ್ ಅವರನ್ನು ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಶಾಕ್ ನೀಡತೊಡಗಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಲಿಂಗಾಯತ ಮುಖಂಡರು ಮಾತ್ರವಲ್ಲ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪುರಸಭೆಗಳಲ್ಲಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿ ಚುನಾಯಿತರಾಗಿದ್ದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡರುಗಳನ್ನು ಕಾಂಗ್ರೆಸ್ ಪಕ್ಷವು ಬರಮಾಡಿಕೊಳ್ಳತೊಡಗಿದೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೀರಶೈವ ಲಿಂಗಾಯತ ಸಮುದಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ ವಿದ್ಯಮಾನದಿಂದ ಬೇಸರಗೊಂಡಿರುವ ಲಿಂಗಾಯತ ಜನಾಂಗದ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ಪಡೆಯಲು ಸರ್ವ ರೀತಿಯ ಪ್ರಯತ್ನಗಳು ನಡೆದಿವೆ. ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪನವರ ಮುಂದಾಳತ್ವದಲ್ಲಿ ಹೆಚ್ಚಿನ ವೀರಶೈವ ಲಿಂಗಾಯತ ಮುಖಂಡರನ್ನು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಕರೆತರುವ ಸಾಹಸ ನಿರಂತರವಾಗಿ ನಡೆದಿದೆ ಎಂದು ಪಕ್ಷದ ವಿಶ್ವಸನೀಯ ಮೂಲಗಳ ಈಟಿವಿ ಭಾರತಕ್ಕೆ ತಿಳಿಸಿವೆ.
ಸಿಎಂ ಸಮುದಾಯದ ಮೇಲೆ ಹೆಚ್ಚಿನ ಕಣ್ಣು : ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರು ಲಿಂಗಾಯತ ಸಮುದಾಯದದಲ್ಲಿ ''ಸಾದರ'' ಒಳಪಂಗಡಕ್ಕೆ ಸೇರಿದವರಾಗಿದ್ದು ಸಾದರ ಲಿಂಗಾಯತ ಮುಖಂಡರನ್ನ ಗುರುತಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಸಾದರ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಒಳಪಂಗಡದ ಮುಖಂಡರನ್ನು ವಿಶೇಷವಾಗಿ ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ಗೆ ಸೇರಿಸಿಕೊಳ್ಳಲಾಗುತ್ತದೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರು ಸಹ ಸಾದರ ಲಿಂಗಾಯತರಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾದರ ಲಿಂಗಾಯತ ಮುಖಂಡರನ್ನು ಗುರುತಿಸಿ ಕಾಂಗ್ರೆಸ್ ಸೇರಲು ಆಹ್ವಾನ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಒಳ ಪಂಗಡಕ್ಕೆ ಸೇರಿದ ಸಾದರ ಲಿಂಗಾಯತ ಮುಖಂಡರಾದ ಮಾಜಿ ಶಾಸಕ ಯು ಬಿ ಬಣಕಾರ್, ಕಿರಣ್ ಕುಮಾರ್, ತಮ್ಮಯ್ಯ ಸೇರಿದಂತೆ ಹಲವರು ಕಾಂಗ್ರೆಸ್ ನತ್ತ ಸೇರಿರುವುದು ಬಿಜೆಪಿಯನ್ನು ಚಿಂತೆಗೀಡುಮಾಡಿದೆ.
ಯಡಿಯೂರಪ್ಪ ಬೆಂಬಲಿಗರೂ ಹಸ್ತದತ್ತ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಾಗು ಬಿಜೆಪಿಯಿಂದ ಹೊರಬಂದು ಕೆಜೆಪಿ ಪಕ್ಷ ಕಟ್ಟಿದಾಗ ಆಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿರೇಕೆರೂರು ಕ್ಷೇತ್ರದ ಮಾಜಿ ಶಾಸಕ ಯು ಬಿ ಬಣಕಾರ್, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಿರಣ್ ಕುಮಾರ್, ಚಿಕ್ಕಮಗಳೂರಿನ ತಮ್ಮಯ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಕಮಲದಲ್ಲಿ ಆತಂಕ ಮೂಡಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರಾಗಿದ್ದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಆರೋಗ್ಯ ಸಚಿವ ಡಾ. ಸುಧಾಕರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ತೋಟಗಾರಿಕೆ ಸಚಿವ ಮುನಿರತ್ನ, ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪೌರಾಡಳಿತ ಸಚಿವ ಎಂ ಟಿ ಬಿ ನಾಗರಾಜ್ ಅವರು ಕಾಂಗ್ರೆಸ್ ತೊರೆದು ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಅದರಂತೆ ಈಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಬೆಂಬಲಿಗರಲ್ಲಿ ಕೆಲವರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಕಡೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: ಸಿಸಿ ಪಾಟೀಲ್ ನನಗೆ ಯಾಮಾರಿಸಿ ಎರಡು ಸಾವಿರ ಕೋಟಿ ಅನುದಾನ ತಂದಿದ್ದಾರೆ : ಸಿಎಂ ಬೊಮ್ಮಾಯಿ