ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ರಾಜ್ಯದ ಪ್ರಮುಖ ದೇವಾಲಯಗಳ ದೇವರ ದರ್ಶನ ಭಾಗ್ಯ ಕರುಣಿಸಲು ಮುಂದಾಗಿದ್ದ ಸರ್ಕಾರ ಇದೀಗ ಆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದು ಕೇವಲ ಸೇವೆಗಳನ್ನು ಕಾಯ್ದಿರಿಸಲು ಸೀಮಿತಗೊಳಿಸಿ ಡಿಜಿಟಲೀಕರಣಕ್ಕೆ ಮುಂದಾಗಿದೆ.
ಹೌದು, ಕೊರೊನಾ ಲಾಕ್ಡೌನ್ನಿಂದಾಗಿ ರಾಜ್ಯದ ಎಲ್ಲ ದೇವಾಲಯಗಳು ಬಂದ್ ಆಗಿವೆ. ಹಾಗಾಗಿ ಜನರ ಅನುಕೂಲಕ್ಕಾಗಿ ಆನ್ಲೈನ್ ಮೂಲಕ ದೇವಾಲಯಗಳಲ್ಲಿನ ಪೂಜಾ, ಕೈಂಕರ್ಯ ಸೇರಿದಂತೆ ಇತರ ಸೇವೆಗಳ ದರ್ಶನಕ್ಕೆ ಅವಕಾಶ ಕಲ್ಪಿಸುವ ಕುರಿತು ಮುಜರಾಯಿ ಇಲಾಖೆ ಚಿಂತನೆ ನಡೆಸಿತ್ತು. ಆದರೆ, ಇದೀಗ ಆ ಚಿಂತನೆಯನ್ನು ಸರ್ಕಾರ ಕೈಬಿಟ್ಟಿದೆ.
ಜೂ. 1 ರಿಂದ ರಾಜ್ಯದ ಎಲ್ಲ ದೇವಾಲಯಗಳು ಆರಂಭಗೊಳ್ಳಲು ಸಮ್ಮತಿ ನೀಡಿರುವ ಕಾರಣ ಮುಜರಾಯಿ ಇಲಾಖೆ ಆನ್ಲೈನ್ ದರ್ಶನ ಸೇವೆ ಚಿಂತನೆ ಕೈಬಿಟ್ಟಿದೆ. ಆನ್ಲೈನ್ನಲ್ಲಿ ಮಹಾ ಮಂಗಳಾರತಿ, ವಿಶೇಷ ಸೇವೆ ಸೇರಿದಂತೆ ದೇವರ ದರ್ಶನ ಮತ್ತು ಪೂಜಾ ಕೈಂಕರ್ಯಗಳ ನೇರ ವೀಕ್ಷಣೆಗೆ 15 ಜಿಲ್ಲೆಗಳ ಎ ವರ್ಗದ ದೇವಾಲಯಗಳಿಗೆ ಅನ್ವಯವಾಗುವಂತೆ ಆ್ಯಪ್ ಅಭಿವೃದ್ಧಿಪಡಿಸುವ ಚಿಂತನೆಗೂ ಮುಜರಾಯಿ ಇಲಾಖೆ ಕೊನೆ ಹಾಡಿದೆ. ಮಹಾ ಮಂಗಳಾರತಿ, ವಿಶೇಷ ಸೇವೆಗಳ ಬುಕ್ಕಿಂಗ್ ಮಾತ್ರ ಆನ್ಲೈನ್ನಲ್ಲಿ ಇರಲಿದೆ.
ದೇವಾಲಯದಲ್ಲಿ ಸಾಮಾನ್ಯ ದರ್ಶನವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಂತ್ರಣ ಮಾಡಲು ಸಾಧ್ಯವಿದೆ. ಆದರೆ, ವಿಶೇಷ ಪೂಜೆ, ಸೇವೆಗಳು, ಮಹಾ ಮಂಗಳಾರತಿ ವೇಳೆ ಸಾಮಾಜಿಕ ಅಂತರ ನಿಯಮಕ್ಕೆ ಅನುಗುಣವಾಗಿಯೇ ಭಕ್ತರಿಗೆ ಅವಕಾಶ ಕಲ್ಪಿಸಬೇಕಿದೆ. ಅಗತ್ಯವಿರುವಷ್ಟೇ ಸಂಖ್ಯೆಗೆ ಅನುಗುಣವಾಗಿ ಆನ್ಲೈನ್ನಲ್ಲಿ ಸೇವೆ ಕಾಯ್ದಿರಿಸುವ ಅವಕಾಶ ನೀಡಿದಲ್ಲಿ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದಕ್ಕೆ ಬ್ರೇಕ್ ಹಾಕಬಹುದಾಗಿದೆ ಎನ್ನುವ ಲೆಕ್ಕಾಚಾರ ಸರ್ಕಾರದ್ದಾಗಿದೆ.
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾಮಾಜಿಕ ಅಂತರ ಮತ್ತು ಸ್ವಚ್ಛತೆ ಕಾಯ್ದುಕೊಂಡು ದೇವಾಲಯಗಳನ್ನು ತೆರೆಯಲಾಗುತ್ತದೆ. ಕೊರೊನಾ ಜೊತೆಯಲ್ಲೇ ನಾವು ಬದುಕಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಬಸ್, ರೈಲುಗಳ ಸಂಚಾರ ಆರಂಭವಾಗಿದೆ. ಅದರಲ್ಲಿ ಜನರು ಯಾವ ರೀತಿ ಸಂಚಾರ ಮಾಡುತ್ತಾರೋ ಹಾಗೆಯೇ ದೇವಾಲಯಗಳಿಗೂ ಭಕ್ತರ ಭೇಟಿಗೆ ಅವಕಾಶ ನೀಡಲಾಗಿದೆ. ಆನ್ಲೈನ್ನಲ್ಲಿ ದೇವರ ದರ್ಶನ ಅಲ್ಲ, ಕೇವಲ ಸೇವೆಗಳ ಕಾಯ್ದಿರಿಸಲು ಮಾತ್ರ ಆನ್ಲೈನ್ನಲ್ಲಿ ವ್ಯವಸ್ಥೆ ಇರಲಿದೆ. ಜೂ. 1ಕ್ಕೂ ಮೊದಲು ಮತ್ತೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಯಾವ ರೀತಿ ಭಕ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು.
ಒಟ್ಟಿನಲ್ಲಿ ಆನ್ಲೈನ್ನಲ್ಲಿ ದೇವರ ದರ್ಶನ ಭಾಗ್ಯ ಕರುಣಿಸುವ ಯೋಜನೆಗೆ ಬ್ರೇಕ್ ಬಿದ್ದಿದ್ದು, ಕೊರೊನಾ ಭೀತಿ ನಡುವೆಯೂ ದೇವರ ದರ್ಶನಕ್ಕೆ ಜನರು ಈ ಹಿಂದಿನಂತೆ ಮತ್ತೆ ದೇವಾಲಯಗಳಿಗೇ ತೆರಳುವ ಅವಕಾಶವನ್ನು ಮರಳಿ ಕಲ್ಪಿಸಲಾಗುತ್ತಿದೆ.