ಬೆಂಗಳೂರು: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ - ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ. ಯುವ ಜನತೆಗಿಂತ ಹೆಚ್ಚಾಗಿ ವೃದ್ಧರೇ ಈ ಬಾರಿ ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ನಡೆಯಲು ಕೂಡದೇ ಇದ್ದರೂ ವೀಲ್ಚೇರ್ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಇದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವಿಶೇಷವಾಗಿ ಗಮನ ಸೆಳೆದಿದೆ.
ಶತಾಯುಷಿ ಅಜ್ಜಿ ಮತದಾನ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡಿದ್ದಾರೆ. ಮೂಗ್ತಿಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 244 ರಲ್ಲಿ ವೋಟ್ ಒತ್ತಿದ್ದಾರೆ. ಈ ಇಳಿ ವಯಸ್ಸಿನ್ನಲ್ಲೂ ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
93 ವರ್ಷದ ವೃದ್ಧೆಯಿಂದ ವೋಟಿಂಗ್: ಕೋಲಾರ ಜಿಲ್ಲೆಯಲ್ಲಿ 93 ವರ್ಷದ ವೃದ್ಧೆ ಮತ ಚಲಾಯಿಸಿದ್ದಾರೆ. ಕೋಲಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 135 ರಲ್ಲಿ ವೋಟಿಂಗ್ ಮಾಡಿದ್ದಾರೆ.
ವೃದ್ಧ ಮತದಾರನಿಗೆ ಡಿಸಿ ಸಹಾಯ ಹಸ್ತ: ಮತದಾನಕ್ಕೆ ಆಗಮಿಸುತ್ತಿದ್ದ ವೃದ್ಧರೊಬ್ಬರಿಗೆ ಬೆಳಗಾವಿ ಡಿಸಿ ಡಾ. ನಿತೇಶ ಪಾಟೀಲ ನೆರವಾಗಿದ್ದಾರೆ. ಚುನಾವಣೆ ಅಧಿಕಾರಿಯೂ ಆಗಿರುವ ಅವರು ಮತದಾನ ಪ್ರಕ್ರಿಯೆ ಪರಿಶೀಲನೆಗೆ ಆಗಮಿಸುತ್ತಿದ್ದ ವೇಳೆ ವೃದ್ಧರೊಬ್ಬರನ್ನು ಮತಗಟ್ಟೆಗೆ ಕರೆ ತಂದು ಸಹಾಯ ಮಾಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.
ವೀಲ್ಚೇರ್ನಲ್ಲಿ ಬಂದು ಮತ ಚಲಾವಣೆ: 89 ವರ್ಷದ ವೃದ್ಧೆ ವೀಲ್ಚೇರ್ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಚಾಮರಾಜಪೇಟೆ ಮತಗಟ್ಟೆಗೆ ವೀಲ್ಚೇರ್ನಲ್ಲಿ ಬಂದ ರೇಸಿ ಎಂಬವರು ವೋಟ್ ಹಾಕಿದ್ದಾರೆ.
'ಮತದಾನ ಮಾಡಲು ಇಷ್ಟ': ಬೆಂಗಳೂರಿನ ಎಂಇಎಸ್ ಮಹಾವಿದ್ಯಾಲಯ ಕಾಲೇಜ್ನಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಹಾಕುತ್ತಿದ್ದಾರೆ. 94 ವರ್ಷದ ಪಾರ್ವತಮ್ಮ ವೀಲ್ಚೇರ್ನಲ್ಲಿ ಬಂದು ವೋಟ್ ಒತ್ತಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನನಗೆ ಮನೆಯಿಂದ ಮತ ಚಲಾಯಿಸಲು ಅವಕಾಶ ಇದ್ದರೂ ರಿಜಿಸ್ಟರ್ ಮಾಡಿಕೊಳ್ಳಬೇಕೆಂದು ಗೊತ್ತಿರಲಿಲ್ಲ. ಮತದಾನ ಮಾಡಲು ಇಷ್ಟ, ಹೀಗಾಗಿಯೇ ಆಗಮಿಸಿದ್ದೇನೆ. ವೋಟ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರೇ ಬರ್ತಿರೋದು ಕೇಳ್ಪಟ್ಟೆ. ಬಹುಶಃ ಹಿರಿಯರಿಗೆ ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ಇದೇ ಅನ್ಸುತ್ತೆ." ಎಂದರು.
ಸ್ಟ್ರೆಕ್ಚರ್ನಲ್ಲಿ ಬಂದು ಮತ ಚಲಾಯಿಸಿದ ವೃದ್ಧೆ: ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ನ ನಿವಾಸಿ 75 ವರ್ಷದ ಶಿಶಿಕಲಾ ಎಂಬವರು ಸ್ಟ್ರೆಕ್ಚರ್ನಲ್ಲಿ ಬಂದು ಮತದಾನ ಮಾಡಿದ್ದಾರೆ. ಬಕ್ಕೆಶ್ವರ ಶಾಲೆಯ ಮತಗಟ್ಟೆ 74 ರಲ್ಲಿ ಮತ ಚಲಾಯಿಸಿದ್ದಾರೆ.
ಮೊಮ್ಮಗನೊಂದಿಗೆ ಬಂದು ವೋಟ್ ಹಾಕಿದ ಅಜ್ಜಿ: 94ನೇ ವಯಸ್ಸಿನಲ್ಲಿಯೂ ಮೊಮ್ಮಗನೊಂದಿಗೆ ಮತದಾನ ಕೇಂದ್ರಕ್ಕೆ ಬಂದು ನಯನಮ್ಮ ಎಂಬವರು ವೋಟ್ ಹಾಕಿದ್ದಾರೆ. ಮಹದೇವಪುರದ ಚೆಲ್ಲಘಟ್ಟದಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಬಳಿಕ ಪ್ರತಿಯೊಬ್ಬರೂ ವೋಟ್ ಮಾಡಬೇಕೆಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.
ವಯೋವೃದ್ಧರ ಮತದಾನದ ಉತ್ಸಾಹ: ಚಿಕ್ಕಮಗಳೂರು ಜಿಲ್ಲೆಯಲ್ಲಿ ವಯೋ ವದ್ಧರೇ ಹೆಚ್ಚು ಮತ ಚಲಾಯಿಸಿದ್ದಾರೆ. ಚಿಕ್ಕಮಗಳೂರು, ಶೃಂಗೇರಿ, ತರೀಕೆರೆ, ಕಡೂರು, ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ವಯೋ ವೃದ್ಧರಲ್ಲಿ ಮತದಾನದ ಉತ್ಸಾಹ ಹೆಚ್ಚಿದೆ. ಈ ಇಳಿ ವಯಸ್ಸಿನಲ್ಲೂ ಮತದಾನ ಮಾಡಿ ಯುವಕ- ಯುವತಿಯರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲುತ್ತದೆ: ಕೆ ಎಸ್ ಈಶ್ವರಪ್ಪ ವಿಶ್ವಾಸ