ಬೆಂಗಳೂರು: ಇಂದು ದೇಶದಾದ್ಯಂತ ರಂಜಾನ್ ಆಚರಣೆ ಹಿನ್ನೆಲೆ ರಾಜ್ಯದಲ್ಲೂ ಈದ್ ಸಂಭ್ರಮ ಕಳೆಗಟ್ಟಿದೆ. ಆದರೆ ಕೊರೊನಾ ಹಿನ್ನಲೆ ಸಾಮೂಹಿಕ ಪ್ರಾರ್ಥನೆಗೆ ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ. ಅದರ ಬದಲು ಮನೆಯಲ್ಲಿ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಿದ್ದಾರೆ. ಈ ಹಿನ್ನಲೆ ಪ್ರತಿವರ್ಷ ಜನ ಸೇರುವ ಈದ್ಗಾ ಮೈದಾನ ಜನರಿಲ್ಲದೇ ಬಿಕೋ ಎನ್ನುತ್ತಿದೆ.
ಮತ್ತೊಂದೆಡೆ ರಂಜಾನ್ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ಅವರ ಸೂಚನೆ ಮೇರೆಗೆ ನಗರದಾದ್ಯಂತ ಬಿಗಿ ಪೊಲೀಸ್ ಬಂದಂಬಸ್ತ್ ಕೈಗೊಳ್ಳಾಗಿದ್ದು, ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಕೊರೊನಾ ಹಾಟ್ ಸ್ಪಾಟ್ಗಳಾದ ಪಾದರಾಯನಪುರ, ಟಿಪ್ಪು ನಗರ, ಚಾಮರಾಜಪೇಟೆ, ಶಿವಾಜಿನಗರ, ಹೊಂಗಸಂದ್ರದ ಪ್ರತಿ ಮಸೀದಿಗಳ ಬಳಿಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಇಲ್ಲದೇ ವಿನಾಕಾರಣ ಓಡಾಟ ಮಾಡಿದರೆ ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಹೀಗಾಗಿ ಖಾಕಿ ಹೊಯ್ಸಳ ಗಸ್ತು ತಿರುಗುತ್ತಿದೆ. ಇದರ ನಡುವೆಯೂ ಕೆಲವೊಂದೆಡೆ ಜನರ ಓಡಾಟ ಮಾತ್ರ ನಿಂತಿಲ್ಲ. ಹೀಗಾಗಿ ಪೊಲೀಸರು ಮನೆಗೆ ಹೋಗುವಂತೆ ವಾರ್ನಿಂಗ್ ನೀಡಿದ್ದಾರೆ