ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಚಿಂತನೆ ಸರ್ಕಾರಕ್ಕೆ ಇಲ್ಲ. ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಡಿಸಿಎಂ ಗೋವಿಂದ ಕಾರಜೋಳ ಅಭಯ ನೀಡಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಬಿಟ್ಟು ಜನ ಹೊರಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಲಾಕ್ಡೌನ್ನಿಂದ ಜನರಿಗೆ ಸಾಕಷ್ಟು ಸಮಸ್ಯೆ ಆಗಿತ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಆಹಾರ ಧಾನ್ಯ, ವಿಶೇಷ ಪ್ಯಾಕೇಜ್ಗಳ ಮೂಲಕ ಜನರ ಕಷ್ಟ ನೀಗಿಸಿವೆ. ಸರ್ಕಾರ ಎಲ್ಲರಿಗೂ ಸಹಾಯ ಮಾಡಿದೆ. ಆದರೂ ಲಾಕ್‌ಡೌನ್ ತೆರವಿಗೆ ಒತ್ತಡ ಬಂತು. ಈಗ ಲಾಕ್‌ಡೌನ್ ಸಡಿಲಗೊಳಿಸಲಾಯ್ತು. ಅನ್ಯ ರಾಜ್ಯಗಳಿಂದ ಜನ ರಾಜ್ಯಕ್ಕೆ ಬರುವಾಗ ಕೊರೊನಾ ಜತೆಗೆ ತಂದರು. ಈಗ ಕೊರೊನಾ ಸೋಂಕು ಹೆಚ್ಚಾಯ್ತು ಎಂದರು.
ಯಾರೂ ಬೆಂಗಳೂರು ಬಿಟ್ಟು ಹೋಗುವ ಅಗತ್ಯ ಇಲ್ಲ. ಕೊರೊನಾಗೆ ಹೆದರಿ ಹೋಗೋದು ಬೇಡ. ಈ ವೈರಸ್ ಎಲ್ಲಾ ಕಡೆಯೂ ಹಬ್ಬುತ್ತೆ. ಸರ್ಕಾರದ ಸೂಚನೆಗಳನ್ನು, ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಕೊರೊನಾದಿಂದ ಬಚಾವಾಗಬಹುದು ಎಂದರು.