ಬೆಂಗಳೂರು: ಲೋಕಸಭೆ ಚುನಾವಣೆ ರಾಜ್ಯದ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಭಾರಿ ಪಕ್ಷೇತರರ ಪಾತ್ರ, ಪ್ರಭಾವ ಹಾಗೂ ಅವರ ಉಪಸ್ಥಿತಿಯಿಂದ ಯಾರಿಗೆ ಎಷ್ಟು ಲಾಭ, ನಷ್ಟವಾಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಸುಮಲತಾ, ಬೆಂಗಳೂರು ಕೇಂದ್ರದಲ್ಲಿ ನಟ ಪ್ರಕಾಶ್ ರೈ, ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಣದಲ್ಲಿದ್ದಾರೆ.
ರಾಜ್ಯದ ಇತಿಹಾಸದಲ್ಲಿ 1951ರ ಈಚೆ ನಡೆದ ಒಟ್ಟು 16 ಲೋಕಸಭೆ ಚುನಾವಣೆಗಳ ಪೈಕಿ ಪಕ್ಷೇತರರು ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಇದುವರೆಗೆ ಎರಡು ಬಾರಿ ಮಾತ್ರ ಪಕ್ಷೆತರ ಅಭ್ಯಥಿರ್ಗಳು ಗೆಲವು ಪಡೆದಿದ್ದಾರೆ. ಮೊದಲನೇಯದು 1957 ಮತ್ತು ಎರಡನೇಯದು 1967ರಲ್ಲಿ. ಇದಾದ ಬಳಿಕ 1996ರಲ್ಲಿ ಕೆಪಿಸಿ ಪಕ್ಷದಿಂದ ಮಾಜಿ ಸಿಎಂ ಎಸ್. ಬಂಗಾರಪ್ಪ ಗೆಲುವು ಸಾಧಿಸಿದ್ದರು.
ಇದು ಒಂದು ಪ್ರಾದೇಶಿಕ ಪಕ್ಷವಾಗಿದ್ದು, ಇದರಿಂದ 1967ರ ನಂತರ ಯಾವೊಬ್ಬ ಪಕ್ಷೇತರರೂ ಇದುವರೆಗೂ ಲೋಕಸಭೆ ಚುನಾವಣೆಯಲ್ಲಿ ಗೆದ್ದಿಲ್ಲ. ಈ ಬಾರಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಂಡ್ಯದಿಂದ ಕಣಕ್ಕಿಳಿದಿರುವ ನಟಿ ಸುಮಲತಾ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ಪತಿ ಹಾಗೂ ಮಾಜಿ ಸಚಿವರೂ ಆಗಿದ್ದ ನಟ ಅಂಬರೀಶ್ ನಿಧನದ ಅನುಕಂಪದ ಅಲೆಯಲ್ಲಿ ಇವರು ಗೆಲ್ಲುವ ಅವಕಾಶವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದು, ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದಾಗಿದೆ.
ಈ ಬಾರಿ ಚುನಾವಣಾ ಅಖಾಡದಲ್ಲಿ ಒಟ್ಟು 265 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಅತಿ ಹೆಚ್ಚು ಮಂದಿ ಬೆಳಗಾವಿಯಲ್ಲಿ ಹಾಗೂ ಅತಿ ಕಡಿಮೆ ಮಂದಿ ಬಳ್ಳಾರಿ ಕ್ಷೇತ್ರದಲ್ಲಿ ಇದ್ದಾರೆ. ರಾಯಚೂರಿನಲ್ಲಿ ಯಾವೊಬ್ಬ ಅಭ್ಯರ್ಥಿಯೂ ಪಕ್ಷೇತರವಾಗಿ ಸ್ಪರ್ಧಿಸಿಲ್ಲ.
ಕ್ಷೇತ್ರವಾರು ಗಮನಿಸುತ್ತಾ ಹೋದರೆ ಚಿಕ್ಕೋಡಿಯಲ್ಲಿ 6, ಬೆಳಗಾವಿಯಲ್ಲಿ 52, ಬಾಗಲಕೋಟೆಯಲ್ಲಿ 4, ವಿಜಯಪುರದಲ್ಲಿ 5, ಕಲಬುರುಗಿಯಲ್ಲಿ 3, ಬೀದರ್ನಲ್ಲಿ 8, ಕೊಪ್ಪಳದಲ್ಲಿ 7, ಬಳ್ಳಾರಿಯಲ್ಲಿ 1, ಹಾವೇರಿಯಲ್ಲಿ 5, ಧಾರವಾಡದಲ್ಲಿ 10, ಉತ್ತರಕನ್ನಡ 6, ದಾವಣಗೆರೆ 18, ಶಿವಮೊಗ್ಗ 7, ಉಡುಪಿ-ಚಿಕ್ಕಮಗಳೂರು 4, ಹಾಸನ 2, ದಕ್ಷಿಣ ಕನ್ನಡ 7, ಚಿತ್ರದುರ್ಗ 12, ತುಮಕೂರು 9, ಮಂಡ್ಯ 16, ಮೈಸೂರು 15, ಚಾಮರಾಜನಗರ 4, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ಉತ್ತರ 20, ಬೆಂಗಳೂರು ಕೇಂದ್ರ 12, ಬೆಂಗಳೂರು ದಕ್ಷಿಣ 14, ಚಿಕ್ಕಬಳ್ಳಾಪುರ 6 ಹಾಗೂ ಕೋಲಾರ 6 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.
ರಾಜ್ಯದಲ್ಲಿ ಕಳೆದ ನಾಲ್ಕಾರು ಲೋಕಸಭೆ ಚುನಾವಣೆಗಳ ಇತಿಹಾಸ ಗಮನಿಸಿ ನೋಡಿದಾಗ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಪಕ್ಷೇತರರು ಒಟ್ಟಾರೆ ಶೇ.10ರಷ್ಟು ಮತ ಕೂಡ ಗಳಿಸಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಬಹುತೇಕ ಭಾಗದಲ್ಲಿ ಶೇ.90ಕ್ಕಿಂತ ಹೆಚ್ಚು ಮತಗಳಿಸಿದ್ದರೆ, ಹಳೆ ಮೈಸೂರು ಹಾಗೂ ಬಯಲುಸೀಮೆ ಭಾಗದಲ್ಲಿ ಬರುವ ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಕೋಲಾರ, ತುಮಕೂರು, ಮಂಡ್ಯ, ಹಾಸನ ಭಾಗದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕೊಂಚ ಮಟ್ಟಿಗೆ ತಮ್ಮ ಅಸ್ಥಿತ್ವ ತೋರಿಸಿದೆ.
ಮಂಡ್ಯ, ಹಾಸನದಲ್ಲಿ ಗೆಲುವು ಸಾಧಿಸಿದ್ದರೆ, ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಹೈದ್ರಾಬಾದ್ ಕರ್ನಾಟಕ ಸೇರಿದಂತೆ ಯಾವೊಂದು ಭಾಗದಲ್ಲಿಯೂ ಪ್ರಾದೇಶಿಕ ಪಕ್ಷವಾಗಲಿ, ಇತರೆ ಪಕ್ಷೇತರರಾಗಲಿ ತಮ್ಮ ಮಹತ್ವದ ಪಾತ್ರ ತೋರಿಸಿಲ್ಲ. ಈ ಬಾರಿಯೂ ಅದು ಮರುಕಳಿಸಲಿದೆ ಎಂದು ಹೆಳಲಾಗುತ್ತಿದೆ.
ಯಾವೊಬ್ಬ ಪಕ್ಷೇತರ ಅಭ್ಯರ್ಥಿಯೂ ಠೇವಣಿ ಉಳಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದ್ದು, ಆದರೆ ಎಲ್ಲಾ ಕ್ಷೇತ್ರದಲ್ಲಯೂ ಪಕ್ಷೇತರರಿದ್ದಾರೆ. ಈ ಬಾರಿ ತಮ್ಮ ಪಕ್ಷದ ವಿರುದ್ಧ ಬಂಡಾಯವೆದ್ದು ಕಣದಲ್ಲಿರುವವರು ಒಬ್ಬರೂ ಇಲ್ಲ. ಆದರೆ ಪಕ್ಷದ ಮೇಲೆ ಬೇಸರಗೊಂಡವರು ಇಲ್ಲವೇ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎನ್ನುವ ಕಾರಣಕ್ಕೆ ಕಣಕ್ಕಿಳಿದವರೇ ಹೆಚ್ಚು.
ಮತ್ತೆ ಕೆಲವರು ಲೋಕಸಭೆ ಚುನಾವಣೆಯಲ್ಲಿ ತಾನೂ ಸ್ಪರ್ಧಿಸಿದ್ದೆ ಎಂದು ಹೇಳಿಕೊಳ್ಳಲು ಹಾಗೂ ಇತರೆ ಹಿತಾಸಕ್ತಿಯಿಂದ ಕಣಕ್ಕಿಳಿದವರಾಗಿದ್ದಾರೆ. ಕಣದಲ್ಲಿ ಅಲ್ಪ ಸಂಖ್ಯಾತರು ಹೆಚ್ಚಿರುವ ಕಡೆ ಕಾಂಗ್ರೆಸ್ಗೆ ಕೊಂಚ ಹೊಡೆತ ಬೀಳಲಿದ್ದು, ಉಳಿದಂತೆ ಯಾವುದೇ ಕಡೆ ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಹೊಡೆತ ಬೀಳುವ ಅಭ್ಯರ್ಥಿಗಳು ಇಲ್ಲ. ಈ ಬಾರಿ ಕೂಡ ಪಕ್ಷೇತರರ ಮತಗಳಿಕೆ ಒಂದೆರಡು ಕ್ಷೇತ್ರ ಹೊರತುಪಡಿಸಿದರೆ ಉಳಿದೆಡೆ ಶೇ.6 ರಿಂದ ಶೇ.10ರ ಒಳಗೆ ಇರಲಿದೆ ಎನ್ನುವುದು ಬಹುತೇಕ ಖಚಿತ.