ಬೆಂಗಳೂರು: ತೀವ್ರ ಸಂಚಾರ ದಟ್ಟಣೆ ಎದುರಿಸುತ್ತಿರುವ ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕೆ ಸ್ಕೈಬಸ್ ವ್ಯವಸ್ಥೆ ಅಗತ್ಯವಾಗಿದ್ದು, ಬೆಂಗಳೂರಿನಲ್ಲಿ ಸ್ಕೈಬಸ್ ಸಾಧಕ ಬಾಧಕ ಕುರಿತು ಅಧ್ಯಯನ ನಡೆಸಿ ಮೂರು ತಿಂಗಳಿನಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗುತ್ತದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಗರದ ತಾಜ್ ವೆಸ್ಟ್ ಎಂಡ್ ಹೋಟಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಶ್ವದ ಹಲವು ನಗರಗಳಲ್ಲಿ ಸ್ಕೈಬಸ್ ಇವೆ. ಇಲ್ಲಿ ಅದು ಸಾಧ್ಯವಾ ಎನ್ನುವ ಕುರಿತು ಬೆಂಗಳೂರು ಸ್ಥಿತಿ ಅಧ್ಯಯನ ನಡೆಸಲು ವಿಶ್ವದ ಎರಡು ಅತ್ಯುನ್ನತ ಸಂಸ್ಥೆಗಳಿಗೆ ಆಹ್ವಾನಿಸಲಾಗುತ್ತಿದೆ. ಮೂರು ತಿಂಗಳಿನಲ್ಲಿ ವರದಿ ತರಿಸಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರದಿಂದಲೇ ಅಗತ್ಯ ಹಣಕಾಸು ನೆರವನ್ನು ಕಲ್ಪಿಸಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಕಷ್ಟಸಾಧ್ಯ ಹಾಗಾಗಿ ಇಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆ ಅಗತ್ಯವಿದೆ. ರೈಲು, ಮೆಟ್ರೋ, ರಸ್ತೆ ಒಂದೇ ಪಿಲ್ಲರ್ ಮೇಲೆ ಇರುವಂತೆ ಮೂರು ಹಂತದ ಸಾರಿಗೆ ವ್ಯವಸ್ಥೆ ಉತ್ತಮ ಆಯ್ಕೆಯಾಗಿದೆ. ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರೋಪ್ ವೇ, ಕೇಬಲ್ ಕಾರ್ ಬಗ್ಗೆಯೂ ಚರ್ಚಿಸಲಾಗಿದೆ. ಟ್ರಾಲಿ ಬಸ್ ಬೆಂಗಳೂರಿನಲ್ಲಿ ಶುರುವಾಗಬೇಕು. ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.
ಸಾರ್ವಜನಿಕ ಸಾರಿಗೆ, ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುತ್ ವಾಹನಗಳ ಅಳವಡಿಕೆ ಬಹಳ ಮುಖ್ಯವಾಗಿದೆ. ಬೆಂಗಳೂರಿಗೆ ಸಾರ್ವಜನಿಕ ಸಾರಿಗೆ ಬಹಳ ಅಗತ್ಯವಿದೆ. ಇಲ್ಲಿ ಪೆಟ್ರೋಲ್ ಬಳಸಿ ಚಲಿಸುವ ವಾಹನಗಳಿಗೆ 10 ರೂ ಖರ್ಚು ಆದರೆ, ಎಲೆಕ್ಟ್ರಿಕ್ ವಾಹನಗಳಿಗೆ ಕೇವಲ 1 ರೂ. ಮಾತ್ರ ಆಗಲಿದೆ. ಮುಂದಿನ ಹತ್ತು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಉತ್ಪಾದನೆ ನಿಲ್ಲಲಿದೆ ಹಾಗಾಗಿ ಈಗಿನಿಂದಲೇ ಇವಿ ಗಳ ಬಳಕೆ ಮಾಡಬೇಕು, ಇದರಿಂದ ದರ ಕಡಿಮೆ ಆಗಲಿದೆ. ಪರಿಸರ ಸ್ನೇಹಿ, ಜೀರೋ ಪೊಲ್ಯೂಷನ್ ಕೂಡ ಆಗಲಿದೆ ಎಂದರು.
ವಾಹನಗಳಲ್ಲಿ ಎಥನಾಲ್ ಬಳಕೆಗೆ ಕರ್ನಾಟಕ ಉತ್ತಮ ಅವಕಾಶ ಇರುವ ರಾಜ್ಯವಾಗಿದೆ. ಇಲ್ಲಿ ಸಾಕಷ್ಟು ಸಕ್ಕರೆ ಕಾರ್ಖಾನೆ ಇವೆ ಹಾಗಾಗಿ ಹೇರಳವಾಗಿ ಎಥನಾಲ್ ಲಭ್ಯವಾಗಲಿದೆ, ಅದನ್ನು ಬಳಸಿಕೊಂಡು ವಾಹನಗಳಿಗೆ ಬಳಸಿದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಕೊಡುಗೆಯಾಗಲಿದೆ. ಬೆಂಗಳೂರು ಟ್ರಾಫಿಕ್ ಜಾಮ್ ನಿಂದ ವಾಯು ಮಾಲಿನ್ಯ ಕೂಡ ಹೆಚ್ಚಾಗುತ್ತಿದೆ ಹಾಗಾಗಿ ಇಲ್ಲಿ ಎಥೆನಾಲ್ ಬಳಕೆ ಅಗತ್ಯವಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು.
ಗೊರಗುಂಟೆ ಪಾಳ್ಯ ಫ್ಲೈ ಓವರ್: ಗೊರಗೊಂಟೆಪಾಳ್ಯ ಫ್ಲೈ ಓವರ್ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಚರ್ಚೆ ಆಗಿದೆ. ಹೈವೆ ಕೇಬಲ್ ಕೆಲಸ ಯಾವ ಏಜೆನ್ಸಿ ಮಾಡಬೇಕು ಅಂತ ಚರ್ಚೆ ಆಗಿದೆ. ಹಳೆ ಗುತ್ತಿಗೆದಾರರು ಮುಂದೆ ಬಾರದ ಹಿನ್ನಲೆಯಲ್ಲಿ ಮತ್ತೊಬ್ಬ ಗುತ್ತಿಗೆದಾರರನ್ನು ಕರೆದು ತ್ವರಿತವಾಗಿವಾ ಕೆಲಸ ಆರಂಭಿಸಲಾಗುತ್ತದೆ. ಇನ್ನೆರಡು ಮೂರು ದಿನದಲ್ಲಿ ಈ ಬಗ್ಗೆ ಆದೇಶ ಹೊರಬೀಳಲಿದೆ ಎಂದರು.
ಎಕ್ಸ್ ಪ್ರೆಸ್ ವೇ ನಲ್ಲಿ ಅಕ್ರಮವಾಗಿಲ್ಲ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದರು. ಪಾರದರ್ಶಕ ಕಾಮಗಾರಿ ನಡೆಸುತ್ತಿದ್ದೇವೆ ಹಾಗಾಗಿ ಮೈಸೂರು, ಬೆಂಗಳೂರು ಎಕ್ಸ್ಪ್ರೆಸ್ ವೇ ನಲ್ಲಿ ಅಕ್ರಮ ನಡೆದಿಲ್ಲ. ಡ್ರೈನೇಜ್ ವ್ಯವಸ್ಥೆಯಲ್ಲಿ ಸಮಸ್ಯೆವಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ, ಅದನ್ನು ಸರಿಪಡಿಸಲಾಗುತ್ತದೆ, ನೋ ಕರೆಪ್ಷನ್, ನೋ ಕಾಂಪ್ರಮೈಸ್ ಇನ್ ಕ್ವಾಲಿಟಿ. ಹೊಸ ತಂತ್ರಜ್ಞಾನ ಬಳಸಿ ಕೆಲಸ ಮಾಡಲಿದ್ದೇವೆ ಎಂದರು.
ಸೀಟ್ ಬೆಲ್ಟ್ ಅಭಿಯಾನಕ್ಕೆ ಅಮಿತ್ ಅಕ್ಷಯ್ ಸಹಕಾರ: ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಅಪಘಾತದ ವೇಳೆ ಹೆಚ್ಚಿನ ಸಾವು ಸಂಭವಿಸುತ್ತಿದೆ, ಕ್ಲಿಪ್ ಇರಿಸಿ ವಾಹನ ಚಲಾಯಿಸುತ್ತಿದ್ದಾರೆ ಇದು ಸರಿಯಲ್ಲ. ನನ್ನ ವಾಹನ ಚಾಲಕ ಕೂಡ ಇದೇ ತಪ್ಪು ಮಾಡಿದ್ದ, ಅವನಿಗೂ ತಿಳಿ ಹೇಳಿದ್ದೇನೆ. ಪ್ರತಿಯೊಬ್ಬರೂ ಈ ವಿಚಾರದಲ್ಲಿ ಜಾಗೃತಿ ವಹಿಸಬೇಕು. ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸಂಭಾವನೆ ಪಡೆಯದೆ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ ಹಾಗಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಫಾಸ್ಟ್ ಟ್ಯಾಗ್ ಬದಲು ನಂಬರ್ ಪ್ಲೇಟ್ ಮೂಲಕ ಪಾವತಿ: ಟೋಲ್ಗಳ ಮುಂದೆ ಸರದಿ ಸಾಲು ತಪ್ಪಿಸಲು ಫಾಸ್ಟ್ಟ್ಯಾಗ್ ವ್ಯವಸ್ಥೆ ಜಾರಿಗೆ ತರಲಾಗಿದೆ ಆದರೂ ಟೋಲ್ಗಳ ಮುಂದೆ ಸಮಸ್ಯೆ ತಪ್ಪಿಲ್ಲ ಹಾಗಾಗಿ ನಂಬರ್ ಪ್ಲೇಟ್ ಮೂಲಕವೇ ಹಣ ಕಡಿತ ಮಾಡುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ, ಟೋಲ್ ವಿಳಂಬ ಸರಿಪಡಿಸಲು ಫಾಸ್ಟ್ ಟ್ಯಾಗ್ ಬದಲು ಹೊಸ ವಿಧಾನ ತರಲಿದ್ದೇವೆ ಎಂದರು.
ಶಿರಾಡಿಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣ : ಶಿರಾಡಿಘಾಟ್ ಇರುವ ರಸ್ತೆಯನ್ನು ಮೊದಲು ನಾಲ್ಕು ಪಥದ ರಸ್ತೆಯಾಗಿ ಮಾಡಲಿದ್ದೇವೆ, ಸಮರೋಪಾದಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಕಾಮಗಾರಿ ಮುಗಿದ ನಂತರ ಎರಡನೇ ಹಂತದಲ್ಲಿ ಶಿರಾಡಿಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಜೆ.ಪಿ.ನಡ್ಡಾ ಬದಲಿಗೆ ಸ್ಮೃತಿ ಇರಾನಿ ಭಾಗಿ!