ಬೆಂಗಳೂರು: ರಾಷ್ಟ್ರೀಯ ತನಿಖಾ ದಳ ನಗರದಲ್ಲಿ ಬೀಡು ಬಿಟ್ಟಿದ್ದು, ಶೋಧ ಕಾರ್ಯಚರಣೆಯಲ್ಲಿ ತೊಡಗಿದೆ. ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಇಸ್ಲಾಮಿಕ್ ಸ್ಟೇಟ್ಸ್ ಜೊತೆ ನಂಟು ಹೊಂದಿರುವ ಆರೋಪ ಹಿನ್ನೆಲೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಈತ ಮೂಲತಃ ಬೆಂಗಳೂರು ನಗರದವನಾಗಿದ್ದು, ನಗರದಲ್ಲಿ ಬಹುತೇಕ ಸ್ನೇಹಿತರ ಜೊತೆ ನಂಟು ಹೊಂದಿದ್ದ. ಹಾಗೆಯೇ ಈತನ ಕುಟುಂಬಸ್ಥರು ನಗರದಲ್ಲೇ ವಾಸವಿದ್ದಾರೆ. ಹೀಗಾಗಿ ಸದ್ಯ ಮೂವರು ಸ್ನೇಹಿತರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಕಾರಣ ಬಹುತೇಕರ ಜೊತೆ ನಂಟು ಹೊಂದಿರುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಯ ಚೈನ್ ಲಿಂಕ್ಅನ್ನು ಎನ್ಐಎ ಪತ್ತೆ ಹಚ್ಚಲು ಶೋಧ ಮುಂದುವರೆಸಿದೆ.
ಮತ್ತೊಂದೆಡೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪ್ರಮುಖ ಆರೋಪಿ ಸಮುಯುದ್ದೀನ್ ಸೇರಿದಂತೆ ಇತರೆ 40 ಆರೋಪಿಗಳು ಉಗ್ರರ ಜೊತೆ ಸಂಪರ್ಕ ಹೊಂದಿರುವ ವಿಚಾರ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ ಎನ್ನಲಾಗಿದೆ. ಹೀಗಾಗಿ ಎನ್ಐಎ ಕೂಡ ಡಿ.ಜೆ.ಹಳ್ಳಿ ಆರೋಪಿಗಳ ಮೇಲೆ ಕಣ್ಣಿಟ್ಟು, ಬಂಧಿತ ಡಾಕ್ಟರ್ಗೆ ಏನಾದ್ರು ಲಿಂಕ್ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರೆಸಿದೆ.
ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್
ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಬಹುತೇಕರು ನಗರವನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ನಡೆಯುವ ಗಲಭೆಯನ್ನ ಮಟ್ಟ ಹಾಕಲು ರಾಷ್ಟ್ರೀಯ ತನಿಖಾ ತಂಡ ಮುಂದಾಗಿದೆ ಎನ್ನಲಾಗುತ್ತಿದೆ.