ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚಿನ ಒಳಗುತ್ತಿಗೆ ನೌಕರರು ಕಳೆದ 15-20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಖಾಯಂಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ ಎಂದು ಎನ್ಹೆಚ್ಎಂ ನೌಕರರ ಸಂಘದ ಅಧ್ಯಕ್ಷ ಎಸ್ ಕುಮಾರ್ ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ( ಎನ್ಹೆಚ್ಎಂ) ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಸ್ ಕುಮಾರ್ ಮಣಿಪುರ ಸರ್ಕಾರ ಈಗಾಗಲೇ ಎನ್ಹೆಚ್ಎಂ ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದೆ. ಅದೇ ರೀತಿ ಒಡಿಶಾ, ರಾಜಸ್ಥಾನ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಒಳಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಎನ್ಹೆಚ್ಎಮ್ ಕಾರ್ಯಕ್ರಮಗಳ ಕರ್ತವ್ಯದ ಜೊತೆಗೆ ಕೋವಿಡ್-19 ಸೋಂಕಿತರ ಆರೈಕೆ, ವ್ಯಾಕ್ಸಿನ್ ಕೊಡುವ ಕೆಲಸವನ್ನು ಮಾಡಲಾಗುತ್ತಿದೆ, ಹೀಗೆ ಜನಸಾಮಾನ್ಯರ ಆರೋಗ್ಯ ಕಾಪಾಡುವ ಹಲವು ಕೆಲಸಗಳಲ್ಲಿ ತೊಡಗಿಕೊಂಡಿದ್ದರೂ ಎನ್ಹೆಚ್ಎಮ್ ಅಡಿಯಲ್ಲಿ ಗುತ್ತಿಗೆ ನೌಕರರಿಗೆ ಅಲ್ಪ ಮೊತ್ತದ ವೇತನ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು. ಒಳಗುತ್ತಿಗೆ ನೌಕರರು ವೈದ್ಯರ ಆದಿಯಾಗಿ ಹಲವಾರು ತಂತ್ರಜ್ಞರನ್ನು ಒಳಗೊಂಡಿರುತ್ತದೆ. ಖಾಯಂ ಸಿಬ್ಬಂದಿ ನೌಕರರಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಖಾಯಂ ನೌಕರರು ಮಾಡುವ ಎಲ್ಲಾ ಕೆಲಸಗಳನ್ನು ಗುತ್ತಿಗೆ ಸಿಬ್ಬಂದಿ ನಿರ್ವಹಿಸಬೇಕಾಗುತ್ತದೆ. ದಿನದ 24 ಗಂಟೆಗಳು ಸಹ ಸೇವೆಯನ್ನು ನೀಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಾನವ ಸಂಪನ್ಮೂಲದ ಕೊರತೆಯಿದ್ದು, ಇದನ್ನು ಸರಿ ತೂಗಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ 60 ಕ್ಕೂ ಹೆಚ್ಚು ಶೇಕಡ ಮಾನವ ಸಂಪನ್ಮೂಲವನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಈ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಎಲ್ಲಾ ತರಹದ ಹೆಚ್ಚಿನ ಮಟ್ಟದ ತರಬೇತಿಯನ್ನು ಕೂಡ ನೀಡಲಾಗಿದೆ ಎಂದು ಹೇಳಿದರು.
ಫೆಬ್ರವರಿಯಿಂದ 13ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ: ಅಲ್ಪ ಮೊತ್ತದ ವೇತನದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದ್ದು, ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಹಾಗೂ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕಳೆದ ಫೆಬ್ರವರಿಯಿಂದ 13 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ನಡೆಸುತ್ತಿದ್ದೇವೆ. 30 ದಿನಗಳೂ ಕಳೆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಹೀಗಾಗಿ ಇಂದಿನಿಂದ ಪ್ರತಿಭಟನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಾರ್ಜಿಂಗ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ: ಮನೆ ಬೆಂಕಿಗಾಹುತಿ