ಬೆಂಗಳೂರು: ಬೆಳೆದ ಬೆಳೆ ಕೈಗೆ ಬರದಂತೆ ಹಾಗು ಎತ್ತರಕ್ಕೆ ಬೆಳೆದು ನಿಂತ ಮರ ಹಾಗೆಯೇ ಸತ್ತು ಹೋಗುವ ಹಿಂದೆ ಕೆಲ ಕೀಟಗಳ ತೊಂದರೆ ಇರುತ್ತದೆ. ತಾವು ಬದುಕಲು ಆಶ್ರಯ ನೀಡಿದ ಮರವನ್ನೇ ಬಲಿಪಡೆಯುವ ಈ ಕೀಟಗಳು ರೈತನನ್ನು ಸಂಕಷ್ಟಕ್ಕೂ ದೂಡುತ್ತವೆ. ತೋಟಗಳಿಗೆ ಕಾಡುವ ಕೀಟಬಾಧೆಯನ್ನು ತಡೆಯಲು ವಿವಿಧ ರೀತಿಯಲ್ಲಿ ಪರಿಹಾರ ಹುಡುಕುವ ಕಾರ್ಯವಾಗಿದೆ. ಆದರೆ, ಈ ನಿಟ್ಟಿನಲ್ಲಿ ನಡೆದ ಸಾಕಷ್ಟು ಸಂಶೋಧನೆಗಳು ಕೂಡಾ ವಿಫಲವಾಗಿವೆ.
ಪ್ರಾದೇಶಿಕವಾಗಿ ಬೇರೆಯದೇ ಸ್ವರೂಪ ಪಡೆಯುವ ಕೀಟಗಳ ನಾಶಕ್ಕೆ ಸಾರ್ವತ್ರಿಕವಾಗಿ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಹೊಸ ತಂತ್ರಜ್ಞಾನ, ಆವಿಷ್ಕಾರಗಳು ಇದೀಗ ಕೃಷಿ ಕ್ಷೇತ್ರದಲ್ಲಿ ಆಗುತ್ತಿವೆ. ಹೊಸ ಹೊಸ ಪರಿಹಾರೋಪಾಯಗಳು ರೈತರಿಗೆ ಲಭಿಸುತ್ತಿದೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಈ ಮಾದರಿಯ ಅನೇಕ ಪರಿಹಾರಗಳು ಕೃಷಿಕರಿಗೆ ಸಿಗುತ್ತಿವೆ. ಸಾಕಷ್ಟು ರೈತರು ಇಲ್ಲಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸದಲ್ಲಿದ್ದಾರೆ. ತೆಂಗು, ತಾಳೆ, ಅಡಿಕೆ, ಖರ್ಜೂರ ಮತ್ತಿತರ ಮರಗಳನ್ನು ಕಾಡುವ ಕೆಂಪು ಮುಖದ ದುಂಬಿ (ಆರ್‍ಪಿಡಬ್ಲ್ಯು) ಹಾಗೂ ಘೇಂಡಾಮೃಗ ಜೀರುಂಡೆ (ಆರ್‍ಬಿ) ಎಂಬೆಲ್ಲಾ ಕೀಟಗಳ ವಿನಾಶಕ್ಕೆ ಪರಿಹಾರ ಒದಗಿಸುವ ಕಾರ್ಯವೂ ಆಗಿದೆ.
ಒಂದೆಕರೆ ವ್ಯಾಪ್ತಿಯ ಪ್ರದೇಶದಲ್ಲಿ ಒಂದು ವಿಶೇಷ ಟ್ರ್ಯಾಪ್ ಅಳವಡಿಸಿ ಕೀಟಗಳನ್ನು ಆಕರ್ಷಿಸುವ ಔಷಧ ಬಳಸಿ ಮರಗಳಿಗೆ ಕಾಡಬಹುದಾದ ಸಮಸ್ಯೆ ನಿವಾರಿಸುವ ತಂತ್ರಜ್ಞಾನವನ್ನು ಜಿಮ್ನಲ್ಲಿ ಪರಿಚಯಿಸಲಾಗಿದೆ. ಇದಕ್ಕೆ ಬಳಸುವ ಮದ್ದು ಎರಡು ತಿಂಗಳು ಕಾರ್ಯನಿರ್ವಹಿಸುವ ಶಕ್ತಿ ಹೊಂದಿದೆ. ಅದೇ ರೀತಿ ಹಣ್ಣಿನ ತೋಟಕ್ಕೆ ಕಾಡುವ ನೊಣಗಳ ಬಾಧೆ ನಿವಾರಣೆಗೆ ವಿಶೇಷವಾಗಿ ಸಿದ್ಧಪಡಿಸಿದ ಟ್ರ್ಯಾಪ್ ಲಭ್ಯವಿದೆ. ಪ್ರತಿ ಎಕರೆಗೆ ಎರಡು ಟ್ರ್ಯಾಪ್‍ಗಳನ್ನು ಬಳಸಲು ಸೂಚಿಸಲಾಗುತ್ತದೆ.
ಇದೇ ರೀತಿ ತರಕಾರಿ ಗಿಡಗಳಿಗೆ ಕಾಡುವ ಕೀಟಗಳ ನಿವಾರಣೆಗೂ ಇದೇ ಮಾದರಿಯ ಪರಿಹಾರ ವ್ಯವಸ್ಥೆ ಇದೆ. ವಿವಿಧ ಗಿಡ ಹಾಗೂ ಬೆಳೆಗಳ ರಸ ಹೀರುವ 22 ಪ್ರಕಾರದ ಕೀಟಗಳನ್ನು ನಿಯಂತ್ರಣಕ್ಕೆ ವಿಶೇಷವಾಗಿ ಸಿದ್ಧಪಡಿಸಿದ ಹಳದಿ, ನೀಲಿ, ಬಿಳಿ ಸ್ಟಿಕರ್ಗಳನ್ನು ಸಿದ್ಧಪಡಿಸಿ ರೈತರಿಗೆ ಮಾರಲಾಗುತ್ತಿದೆ. ಇವುಗಳ ಮೇಲ್ಪದರಕ್ಕೆ ಅಂಟಿಸಿದ ಮ್ಯಾಜಿಗ್ ಅಂಟು ಕೀಟಗಳನ್ನು ಸೆಳೆಯುತ್ತದೆ. ಹಳದಿ ಹಾಗೂ ಬಿಳಿ ಸ್ಟಿಕರ್ಗಳು ಪ್ರತಿ ಎಕರೆಗೆ ತಲಾ ಹತ್ತು ಹಾಗೂ ನೀಲಿ ಸ್ಟಿಕರ್ ತಲಾ ಐದು ಅಳವಡಿಸಲು ಸೂಚಿಸಲಾಗುತ್ತದೆ.
ಕೀಟಗಳ ಬಾಧೆ ತಡೆಯಲಾಗದೇ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ ಬ್ಯಾರಿಕ್ಸ್ ಆಗ್ರೋ ಸೈನ್ಸಸ್ ಸಂಸ್ಥೆ ನೆರವಾಗಿದೆ. ಈ ಸಂಸ್ಥೆ ಇಂದು ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಿ ರೈತರಿಗೆ ಅನುಕೂಲವಾಗುವ ಹಾಗೂ ಕೃಷಿ ಬೆಳೆಯನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಸೌಕರ್ಯವನ್ನು ಒದಗಿಸುತ್ತಾ ಬಂದಿದೆ. ಇದೇ ನಿಟ್ಟಿನಲ್ಲಿ ಈಗ ಒಂದಿಷ್ಟು ಹೊಸ ಆವಿಷ್ಕಾರವನ್ನು ಪರಿಚಯಿಸಿದೆ.
ಬ್ಯಾರಿಕ್ಸ್ ಸಂಸ್ಥೆಯ ರಾಜ್ಯ ವಿಭಾಗದ ಮುಖ್ಯಸ್ಥ ದಿಗ್ವಿಜಯ್ ಎನ್ ಪ್ರಕಾರ, ನಾವು ಕಳೆದ 12 ವರ್ಷದಿಂದ ರೈತರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ವಿಶೇಷ ಸಂಶೋಧನೆ ನಡೆಸಿ ರೈತರಿಗೆ ಸವಲತ್ತು ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯದ ರೈತರು ಇದನ್ನು ಬಳಸಿದ್ದಾರೆ. ಉತ್ತಮ ಫಲಿತಾಂಶ ಲಭಿಸಿದೆ. ಎಲ್ಲಾ ವಿಧದ ವಾತಾವರಣದಲ್ಲೂ ಇದು ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಮೆಕ್ಕೆಜೋಳದಿಂದ ಆಹಾರ ಉತ್ಪನ್ನ ಮಾತ್ರವಲ್ಲ..ಕವರ್,ಬ್ಯಾಗ್ ಕೂಡ ಸಿದ್ದವಾಗುತ್ತೆ: ಜಿಮ್ ನಲ್ಲಿ ಗಮನ ಸೆಳೆದ ಬಯೋ ಪ್ಲಾಸ್ಟಿಕ್