ಬೆಂಗಳೂರು: 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜಯ ಗಳಿಸಿರುವ ನೂತನ ಶಾಸಕರಿಗೆ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 22ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಗೆದ್ದ ಎಲ್ಲಾ 15 ಮಂದಿ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಡಿಸೆಂಬರ್ 5ರಂದು ನಡೆದಿದ್ದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಗೆದ್ದ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ನೂತನ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು, ಪ್ರತಿಪಕ್ಷ ನಾಯಕರು ಭಾಗಿಯಾಗಲಿದ್ದಾರೆ.
ಶಾಸಕರ ಪ್ರಮಾಣ ವಚನಕ್ಕೆ ದೊಡ್ಡ ಮಟ್ಟದ ಕಾರ್ಯಕ್ರಮ: ಅನರ್ಹ ಶಾಸಕರು ಬಿಜೆಪಿ ಸೇರುವಾಗ ಅದ್ಧೂರಿಯಾಗಿ ಬರಮಾಡಿಕೊಂಡಿದ್ದ ಬಿಜೆಪಿ, ಇದೀಗ ಉಪ ಚುನಾವಣೆಯಲ್ಲಿ ಗೆದ್ದವರ ಪ್ರಮಾಣ ವಚನ ಸ್ವೀಕಾರಕ್ಕೂ ದೊಡ್ಡ ವೇದಿಕೆ ಕಲ್ಪಿಸುತ್ತಿದೆ. ಸಾಮಾನ್ಯವಾಗಿ ಸದನದಲ್ಲಿ ಅಥವಾ ಸ್ಪೀಕರ್ ಕಚೇರಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಾಡುವ ಮೂಲಕ ಗೆದ್ದವರ ಪ್ರಮಾಣ ವಚನ ಸ್ವೀಕಾರಕ್ಕೆ ದೊಡ್ಡಮಟ್ಟದ ವೇದಿಕೆ ಸಿದ್ಧಪಡಿಸಿದೆ.