ಬೆಂಗಳೂರು: ಭಾನುವಾರ(ನಾಳೆ) ನೇರಳೆ ಮೆಟ್ರೋ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚೆಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ವಿಸ್ತರಣೆ ಮಾರ್ಗಗಳನ್ನು ಸುರಕ್ಷತಾ ಪರೀಕ್ಷೆಗಳನ್ನು ಭಾನುವಾರ ನಡೆಸಲಾಗುವುದು. ವಿವರವಾದ ಸುರಕ್ಷತಾ ಪರೀಕ್ಷೆಗಳನ್ನು ಕೈಗೊಳ್ಳಲು ಹೆಚ್ಚಿನ ಸಮಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.
ಹೀಗಾಗಿ ಭಾನುವಾರ ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ, ಬೈಯಪ್ಪನಹಳ್ಳಿ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆನ ಹಾಗೂ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಇರುವುದಿಲ್ಲ. ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆಗಳು ಲಭ್ಯವಿರುತ್ತದೆ.
ಮಧ್ಯಾಹ್ನ 1 ಗಂಟೆಯ ನಂತರ, ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಮತ್ತು ಕೃಷ್ಣರಾಜಪುರದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದವರೆಗೆ ಎಂದಿನಂತೆ ರಾತ್ರಿ 11 ಗಂಟೆಯವರೆಗೆ ವಾಣಿಜ್ಯ ಸೇವೆಗಳು ಲಭ್ಯವಿರುತ್ತದೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಬೈಯಪ್ಪನಹಳ್ಳಿ- ಕೃಷ್ಣರಾಜಪುರ ನಿಲ್ದಾಣಗಳ ನಡುವೆ ಸಿಗ್ನಲಿಂಗ್ ಪರೀಕ್ಷೆ: ಮೆಟ್ರೋ ರೈಲು ಕಾರ್ಯಾಚರಣೆ ಸಮಯದಲ್ಲಿ ಬದಲಾವಣೆ
ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ: ಕೆ.ಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದ ಮೊದಲ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ಇತ್ತೀಚೆಗೆ ಯಶಸ್ವಿಯಾಗಿ ನಡೆದಿದೆ. 2.5 ಕಿಲೋ ಮೀಟರ್ ದೂರವನ್ನು 47 ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು ಎಂದು ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದರು.
ಈ ಮಾರ್ಗದ ಮೆಟ್ರೊ ವಾಣಿಜ್ಯ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ತಿಂಗಳಲ್ಲೇ ಚಾಲನೆ ನೀಡಿದ್ದರು. ಬೈಯಪ್ಪನಹಳ್ಳಿ- ಕೆ.ಆರ್ ಪುರದ ನಡುವೆ ಮೆಟ್ರೊ ಸಂಚರಿಸದ ಕಾರಣದಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಬೈಯಪ್ಪನಹಳ್ಳಿಗೆ ಬಂದವರು ವೈಟ್ ಫೀಲ್ಡ್‌ನತ್ತ ತೆರಳಲು ಆಟೋ, ಕ್ಯಾಬ್, ಬಿಎಂಟಿಸಿ ಬಸ್ ಅನ್ನು ಅವಲಂಬಿಸಬೇಕಿತ್ತು. ಇದೀಗ ವಾಣಿಜ್ಯ ಸಂಚಾರ ಆರಂಭಗೊಂಡರೆ ಈ ಸಮಸ್ಯೆ ಕೊನೆಗೊಳ್ಳಲಿದ್ದು, ವೈಟ್ ಫೀಲ್ಡ್ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ರೋಲಿಂಗ್ ಸ್ಟಾಕ್, ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಷನ್ಸ್ ಹಾಗು ಟ್ರ್ಯಾಕ್ ತಂಡದಿಂದ ಮೆಟ್ರೋ ಸಿಬ್ಬಂದಿ ಒಳಗೊಂಡಿರುವ 12 ಅಧಿಕಾರಿಗಳೊಂದಿಗೆ ಲೊಕೊ ಪೈಲಟ್ ಪಿ ಜಗದೀಶನ್ ರೈಲಿನ ಪ್ರಾಯೋಗಿಕ ಸಂಚಾರ ಕೈಗೊಂಡು ಪರಿಶೀಲಿಸಿದ್ದರು.
ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೊಂದು ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ: ಟ್ರಾಫಿಕ್ ಸಮಸ್ಯೆ ಕೊನೆಯಾಗಲು ದಿನಗಣನೆ