ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಈ ಮಾಹಿತಿ ನೀಡಿದ್ದಾರೆ. ಮೇ 29 ರಂದು ಚುನಾವಣೆ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಕುಂದಗೋಳ ಪಟ್ಟಣ ಪಂಚಾಯತ್ ಹೊರತುಪಡಿಸಿ ಉಳಿದ 63 ನಗರಸಭೆಗಳು, 33 ಪುರಸಭೆಗಳು, 22 ಪಟ್ಟಣ ಪಂಚಾಯತ್, 8 ತಾಲೂಕು ಪಂಚಾಯತಗಳ 10 ಕ್ಷೇತ್ರಗಳ ಸದಸ್ಯ ಸ್ಥಾನ ಹಾಗೂ ಗ್ರಾಮ ಪಂಚಾಯತ್ಗಳಲ್ಲಿ ತೆರವಾಗಿರುವ 202 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದರು.
ನಾಮಪತ್ರ ಸಲ್ಲಿಸಲು ಮೇ 16ರ ತನಕ ಅವಧಿ ಹಾಗೂ ಹಿಂಪಡೆದುಕೊಳ್ಳಲು ಮೇ 20 ರವೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಮೇ 31 ರಂದೇ ಮತ ಎಣಿಕೆ ನಡೆಯಲಿದೆ.
ಇನ್ನು ಮೇ 29ರಂದೇ ಬಿಬಿಎಂಪಿಯ ಎರಡು ವಾರ್ಡುಗಳಿಗೆ ಉಪಚುನಾವಣೆಯೂ ನಡೆಯಲಿದೆ. ಬಿಬಿಎಂಪಿಯ ಇಬ್ಬರು ಸದಸ್ಯರ ಅಕಾಲಿಕ ನಿಧನದಿಂದ ತೆರವಾಗಿದ್ದ ಸಗಾಯಿಪುರ ವಾರ್ಡ್ ಹಾಗೂ ಕಾವೇರಿಪುರ ವಾರ್ಡುಗಳಿಗೂ ಬೈಎಲೆಕ್ಷನ್ ನಡೆಯಲಿದೆ ಎಂದರು.
ತುಮಕೂರು ಮಹಾನಗರ ಪಾಲಿಕೆ ವಾರ್ಡ್ ನಂ 22, ಬೆಂಗಳೂರು ಹೆಬ್ಬಗೋಡಿ ನಗರಸಭೆ ವಾರ್ಡ್ ನಂ. 26, ಬೆಳಗಾವಿ ಸದಲಗ ಪುರಸಭೆ ವಾರ್ಡ್ ನಂ 19 ಹಾಗೂ ಮುಗಳಗೋಡ ಪುರಸಭೆ ವಾರ್ಡ್ ನಂ. 2ಕ್ಕೂ ಉಪಚುನಾವಣೆ ನಡೆಯಲಿದ್ದು, ಈ ಬಾರಿ ನಗರ ಸ್ಥಳೀಯ ಸಂಸ್ಥೆ ಉಪ ಚುನಾವಣೆಯಲ್ಲಿ NOTA ಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ 1,646 ಮತಗಟ್ಟೆಗಳು, 8,230 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತದಾನಕ್ಕಾಗಿ ಇವಿಎಂ ಬಳಸಲಾಗುತ್ತಿದ್ದು, 1998 ಬ್ಯಾಲೆಟ್ ಯುನಿಟ್ ಹಾಗೂ ಕಂಟ್ರೋಲ್ ಯುನಿಟ್‌ಗಳನ್ನು ಬಳಸಲಾಗುವುದು ಎಂದು ವಿವರಿಸಿದರು.
ಆಸ್ತಿ ವಿವರ ಘೋಷಿಸದ ಸದಸ್ಯರ ಸದಸ್ಯತ್ವ ರದ್ದು
ಆಸ್ತಿ ವಿವರ ಘೋಷಿಸದ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗುವುದು ಎಂದು ಇದೇ ವೇಳೆ ಚುನಾವಣಾಧಿಕಾರಿಗಳು ಎಚ್ಚರಿಸಿದರು. ಗ್ರಾಮಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಆಸ್ತಿವಿವರ ಘೋಷಣೆ ಮಾಡಬೇಕು. 2016-18 ರ ವರೆಗೆ ಆಸ್ತಿವಿವರ ಸಲ್ಲಿಸ ಘೋಷಿಸದ ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. 2016ರಲ್ಲಿ ತಾ.ಪಂ. ನ ಒಬ್ಬರು, ಗ್ರಾ.ಪಂ. ನ ಮೂವರ ಸದಸ್ಯತ್ವ ರದ್ದು, 2017 ರಲ್ಲಿ ಗ್ರಾ.ಪಂ. ನ 9 ಸದಸ್ಯರ ಸದಸ್ಯತ್ವ ರದ್ದು, 2018 ರಲ್ಲಿ ಗ್ರಾ.ಪಂ.ನ 12 ಸದಸ್ಯರ ಸದಸ್ಯತ್ವ ರದ್ದುಪಡಿಸಲಾಗಿದೆ. ಇನ್ನು 2016 ರಲ್ಲಿ ಆಸ್ತಿ ವಿವರದಲ್ಲಿ ಸುಳ್ಳು ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರದ ಓರ್ವ ಸದಸ್ಯನ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ಇದೇ ವೇಳೆ ಶ್ರೀನಿವಾಸಾಚಾರಿ ತಿಳಿಸಿದರು.
ಎರಡು ವಾರ್ಡ್ ಗಳಿಗೆ ಮಾತ್ರ ನೀತಿ ಸಂಹಿತೆ
ಕಾವೇರಿಪುರ ಜೆಡಿಎಸ್ ಸದಸ್ಯೆ ಹಾಗೂ ಉಪಮೇಯರ್ ಆಗಿದ್ದ, ರಮೀಳಾ ಉಮಾಶಂಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಲ್ಲದೆ ಸಗಾಯಿಪುರಂನ ಏಳುಮಲೈ ಅವರು ಕೂಡಾ ಅನಾರೋಗ್ಯದ ಕಾರಣ ಹಠಾತ್ ನಿಧನ ಹೊಂದಿದ್ದರು. ಹೀಗಾಗಿ ಇಬ್ಬರು ಕಾರ್ಪೋರೇಟರ್ಸ್ ಸ್ಥಾನ ಖಾಲಿ ಇರುವ ಈ ಎರಡು ವಾರ್ಡ್ ಗಳಿಗೆ ಉಪ ಚುನಾವಣೆ ನಡೆಯಲಿದೆ.
ಈಗಾಗಲೇ ಮೇ 23 ರವರೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಬಿಬಿಎಂಪಿ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ. ಹೀಗಾಗಿ ವಾರ್ಡ್ ಗಳ ಉಪಚುನಾವಣೆ ಹಿನ್ನಲೆ ಕೇವಲ ಎರಡು ವಾರ್ಡ್ ವ್ಯಾಪ್ತಿಯಲ್ಲಿ ಮಾತ್ರ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಪಾಲಿಕೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಅಲ್ಲದೆ ಮೇಯರ್ ಗಂಗಾಂಬಿಕೆಯವರ ಅವಧಿ ಇನ್ನು ಕೇವಲ ಐದು ತಿಂಗಳು ಉಳಿದಿರೋದಿರಂದ ಕಡಿಮೆ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಹೀಗಾಗಿ ಎರಡು ವಾರ್ಡ್ ಗಳಲ್ಲಿ ಮಾತ್ರ ಮೇ 31 ರವರೆಗೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಹೇಳಿದರು.