ಬೆಂಗಳೂರು: ಸರ್ಕಾರಿ ಕೋಟಾದಡಿ ಮೀಸಲಿರಿಸಿದ ಬೆಡ್ಗಳನ್ನು ಬ್ಲಾಕ್ ಮಾಡಿ ಅವ್ಯವಹಾರ ಬಯಲಿಗೆಳೆದಿರುವ ಸಂಸದ ತೇಜಸ್ವಿ ಸೂರ್ಯ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ಮಾಡಿ ದಂಧೆಯಲ್ಲಿ ತೊಡಗಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹೊರಬಂದು ಮಾತನಾಡಿರುವ ಅವರು, ಬೆಡ್ ಹಗರಣ ಕುರಿತು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನಿನ್ನೆ ರಾತ್ರಿಯಿಂದಲೂ ಸಾಕಷ್ಟು ಮಾಹಿತಿ ಪೊಲೀಸರು ಕಲೆ ಹಾಕಿದ್ದಾರೆ. ಹಣ ಪಡೆದವರು ಎಲ್ಲವನ್ನು ಗೂಗಲ್ ಪೇ ಮೂಲಕ ಪಡೆದಿದ್ದಾರೆ. ಮುಖ್ಯಮಂತ್ರಿ ಸಹ ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವನ್ನ ಬಂಧಿಸುಂತೆ ಹೇಳಿದ್ದಾರೆ. ನನಗೆ ಬಂದಿರುವ ಮಾಹಿತಿಯನ್ನು ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಲಭ್ಯವಾಗಿರುವ ಫೋನ್ ಸಂಭಾಷಣೆ ಸಹ ಸಾಕಷ್ಟು ಸಿಕ್ಕಿದ್ದು ಅದೆಲ್ಲ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎಂದರು.
ಪ್ರಕರಣ ಕುರಿತಂತೆ ರಾಜಕೀಯ ಮಾಡುತ್ತಿಲ್ಲ. ಸಮಸ್ಯೆಗಳ ಜೊತೆಗೆ ಪರಿಹಾರ ಸಹ ಕೇಳುವಂತೆ ಸಿಎಂ ಹೇಳಿದ್ದಾರೆ. ಈ ಬಗ್ಗೆ ನಂದನ್ ನಿಲೇಕಣಿ ಅವರಿಗೂ ಕಾಲ್ ಮಾಡಿ ಮಾತನಾಡಿದ್ದೇನೆ. ಸಾಫ್ಟ್‌ವೇರ್ ಇಂಜಿನಿಯರ್ಗಳ ಒಳ್ಳೆಯ ತಂಡ ನೀಡುವುದಾಗಿ ಭರವಸೆ ನೀಡಿದ್ದಾರೆ. ಬೆಡ್ ಬುಕ್ ಮಾಡುವ ಸಾಫ್ಟ್ವೇರ್ನಲ್ಲಿ ಯಾವುದೇ ಲೋಪದೋಷ ಇಲ್ಲದ ಹಾಗೆ ಮಾಡಲಾಗುವುದು ಎಂದರು.