ಬೆಂಗಳೂರು: ದೈಹಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಭಾವಿಸಿ ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಕೂಡಿ ಮದ್ಯದ ನಶೆಯಲ್ಲಿ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಫಿಟೌನ್ನಲ್ಲಿ ನಡೆದಿದೆ.
ಏನಿದು ಘಟನೆ?
16 ವರ್ಷದ ನಂದು ಕೊಲೆಯಾದ ಬಾಲಕ. ಕೃತ್ಯ ಎಸಗಿದ್ದ ಬಾಲಕನ ತಾಯಿ ಗೀತಾ ಹಾಗೂ ಪ್ರಿಯಕರ ಶಕ್ತಿ ಎಂಬುವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಹಲವು ವರ್ಷಗಳಿಂದ ಮರ್ಫಿಟೌನ್ನಲ್ಲಿ ವಾಸವಾಗಿದ್ದ 35 ವರ್ಷದ ಗೀತಾ, ಆರು ವರ್ಷಗಳ ಹಿಂದೆ ಕೌಟುಂಬಿಕ ಕಾರಣದಿಂದ ಗಂಡನಿಂದ ದೂರವಾಗಿದ್ದಳು.
ಸೋಷಿಯಲ್ ಮೀಡಿಯಾ ಹುಚ್ಚು ಬೆಳೆಸಿಕೊಂಡಿದ್ದ ಗೀತಾ
ಗೀತಾಳಿಗೆ ಮೃತ ನಂದು ಸೇರಿ ಇಬ್ಬರು ಮಕ್ಕಳಿದ್ದರು. ಜೀವನಕ್ಕಾಗಿ ಅವರಿವರ ಮನೆಯಲ್ಲಿ ಮನೆ ಗೆಲಸ ಮಾಡುತ್ತಿದ್ದಳು. ಸೋಷಿಯಲ್ ಮೀಡಿಯಾ ಹುಚ್ಚು ಬೆಳೆಸಿಕೊಂಡಿದ್ದ ಗೀತಾಗೆ, ಕೆಲ ತಿಂಗಳ ಹಿಂದೆ ಬಾಗಲೂರು ನಿವಾಸಿ ಆರೋಪಿ ಶಕ್ತಿಯ ಪರಿಚಯವಾಗಿತ್ತು. ಪರಿಚಯ ಸಲುಗೆಗೆ ತಿರುಗಿ ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.
ಬಾಂಧವ್ಯ ಹೆಚ್ಚಾಗುತ್ತಿದ್ದಂತೆ ಆಗಾಗ ಗೀತಾಳ ಮನೆಗೆ ಶಕ್ತಿ ಬಂದು ಹೋಗುತ್ತಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಂದು, ಶಕ್ತಿ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದ. ಮಗನ ವರ್ತನೆ ಬಗ್ಗೆ ಗೀತಾ ಶಕ್ತಿಗೆ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದ. ಈ ನಿರ್ಧಾರಕ್ಕೆ ಗೀತಾ ಕೂಡಾ ಸಹಮತ ವ್ಯಕ್ತಪಡಿಸಿದ್ದಳು.
ಪ್ರಿಯಕರನ ಕೊಲೆ ಸ್ಕೆಚ್ಗೆ ಸಾಥ್ ನೀಡಿದ್ದ ತಾಯಿ
ಹತ್ಯೆಗೆ ಸ್ಕೆಚ್ ಹಾಕಿದ ನಂತರ ನಿನ್ನೆ ಗೀತಾಳ ಮನೆಗೆ ಮಾತನಾಡಿಸುವ ಸೋಗಿನಲ್ಲಿ ಶಕ್ತಿ ಬಂದಿದ್ದಾನೆ. ಈತನೊಂದಿಗೆ ಗೀತಾ ಹಾಗೂ ನಂದು ಸೇರಿ ಮರ್ಫಿಟೌನ್ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸುಖಾಸುಮ್ಮನೆ ಗಲಾಟೆ ತೆಗೆದು ಹಲ್ಲೆ ಮಾಡಿ ಚಾಕುವಿನಿಂದ ಆತನ ಹೊಟ್ಟೆ, ಎದೆ ಭಾಗಕ್ಕೆ ಇರಿದು ಸಾಯಿಸಿದ್ದಾನೆ.
ಕೃತ್ಯವೆಸಗಿದ ಬಳಿಕ ಪರಾರಿಯಾಗುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಬಂಧಿಸಿರುವುದಾಗಿ ನಗರದ ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.