ಬೆಂಗಳೂರು: ವಿಧಾನಾಸಭೆ ಚುನಾವಣೆ ಘೋಷಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಈಗಾಗಲೇ ಬಹುತೇಕ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮ- ತಮ್ಮ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಅಖಂಡ ನಾಮಪತ್ರ ಸಲ್ಲಿಕೆ: ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸ ಮೂರ್ತಿ ಸೋಮವಾರ ನಾಮಪತ್ರ ಸಲ್ಲಿಸಿದರು. ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ಫ್ರೇಜರ್‌ಟೌನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ಕಾಂಗ್ರೆಸ್‌ನ ಹಾಲಿ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕಾಂಗ್ರೆಸ್ ಇದುವರೆಗೂ ಟಿಕೆಟ್ ಘೋಷಿಸದ ಕಾರಣ ಅವರು ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಅವರು ಈಗ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ದಿನವೇ ರಾಜರಾಜೇಶ್ವರಿನಗರ ಕ್ಷೇತ್ರ ರಣಾಂಗಣವಾಗಿ ಪರಿಣಮಿಸಿತು. ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಸಿ ಹೊರಬರುವ ಸಮಯದಲ್ಲಿ ಪರಸ್ಪರ ಮುಖಾಮುಖಿಯಾದರು.
ಕಾಂಗ್ರೆಸ್ ಮೆರವಣಿಗೆ ಎದುರು ಕಾಣುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಒಮ್ಮೆಲೇ ಮೋದಿ, ಮೋದಿ ಎಂದು ಕೂಗಲು ಶುರು ಮಾಡಿದರು. ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಡಿಕೆ ಘೋಷಣೆ ಕೂಗಿದರು. ಎರಡು ಪಕ್ಷದ ಕಾರ್ಯಕರ್ತರು ನಿರಂತರವಾಗಿ ಘೋಷಣೆ ಕೂಗುತ್ತಾ ಪರಸ್ಪರ ಎದುರು ಬದುರಾದಾಗ ಕೊಂಚಮಟ್ಟಿನ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಒಂದು ಹಂತದಲ್ಲಿ ಪರಸ್ಪರ ಕಾರ್ಯಕರ್ತರು ಘರ್ಷಣೆಗೆ ಹಿಡಿಯುವ ಸೂಚನೆ ಕಾಣುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಆದರೆ ಎರಡು ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸುವುದು ಪೊಲೀಸರಿಗೆ ಹರಸಾಹಸವಾಗಿ ಪರಿಣಮಿಸಿತು. ಎಸಿಪಿ ಭರತ್ ರೆಡ್ಡಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಎರಡು ಗಂಟೆಗೂ ಹೆಚ್ಚು ಕಾಲ ತಮ್ಮ ಪೊಲೀಸ್ ಸಿಬ್ಬಂದಿ ಜೊತೆ ಶ್ರಮಿಸಿದ್ದರು.
ನಾಮಪತ್ರ ಸಲ್ಲಿಸಿದ ಇತರ ಪ್ರಮುಖರು: ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಗಾಂಧಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಇನ್ನೊಂದೆಡೆ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಸಹ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಅಭ್ಯರ್ಥಿಗಳು ಆಗಮಿಸಿದ ಹಿನ್ನೆಲೆ ಸಾಕಷ್ಟು ಸಂಚಾರ ದಟ್ಟಣೆ ಉಂಟಾಯಿತು.
ಪೊಲೀಸರ ಮೇಲೆ ಗರಂ ಆದ ಚುನಾವಣಾಧಿಕಾರಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎಂ ಸತೀಶ್ ರೆಡ್ಡಿ ಎಂದಿನಂತೆ ಅಭಿಮಾನಿ ದಂಡು ಜೊತೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದ್ದರು. ಈ ವೇಳೆ, ಶಾಸಕರ ಜೊತೆ ಆರೇಳು ಮಂದಿ ಬೆಂಬಲಿಗರು ಚುನಾವಣಾಧಿಕಾರಿಗಳ ಕಚೇರಿ ಹೋಗಿದ್ದರು. ಇದನ್ನು ಗಮನಿಸಿದ ಚುನಾವಣಾಧಿಕಾರಿಗಳು ಪೊಲೀಸರ ಮೇಲೆ ಗದರಿ ಉಳಿದವರನ್ನು ಹೊರಕಳಿಸಿದ ಘಟನೆ ನಡೆಯಿತು. ಬಳಿಕ ನಾಮಪತ್ರ ಸಲ್ಲಿಸಿ ಹೊರ ನಡೆದರು.
ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರ ಸಲ್ಲಿಕೆ: 177 ರ ಆನೇಕಲ್ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ 6 ನಾಮಪತ್ರ ಸಲ್ಲಿಕೆಯಾಗಿದೆ. ಶನಿವಾರ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದಿಂದ ಅನ್ಬುರಾಜ್, ಸೋಮವಾರ ಬಿಜೆಪಿ ಪಕ್ಷ ಸಿ ಶ್ರೀನಿವಾಸ್ ಎರೆಡು ನಾಮಪತ್ರ, ಪಕ್ಷೇತರರಾಗಿ ಗುಡ್ನಹಳ್ಳಿ ಗೋಪಿನಾಥ್ ಸಿ, ಆಪ್ ಪಕ್ಷದ ಮುನೇಶ್ ಎಂ ಮತ್ತು ಬಹುಜನ ಸಮಾಜ ಪಕ್ಷದ ಡಾ ವೈ ಚಿನ್ನಪ್ಪ ಚಿಕ್ಕ ಹಾಗಡೆ ನಾಮಪತ್ರ ಸಲ್ಲಿಸಿದರು.
ಎರಡು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ: ಸಂಪ್ರದಾಯದಂತೆ ಸೋಮವಾರ ಎರಡು ನಾಮಪತ್ರ ಸಲ್ಲಿಸಿದರು. ಬಳಿಕ ಏಪ್ರಿಲ್ 20 ರಂದು ಮತ್ತೆ ಜನಸಾಗರದ ಮೂಲಕ ನಾಮಪತ್ರ ಸಲ್ಲಿಸುವ ಪ್ರಕಟಣೆಯನ್ನು ಬಿಜೆಪಿ ಅಭ್ಯರ್ಥಿ ಸಿ ಶ್ರೀನಿವಾಸ್ ಮಾಡಿದರು. ಇದೇ ಮೊದಲು ಇಂತಹದೊಂದು ಹೊಸ ಸಂಪ್ರದಾಯಕ್ಕೆ ಆನೇಕಲ್ ಚುನಾವಣೆ ಸಾಕ್ಷಿಯಾಗಿದೆ.
ಆಮ್ ಆದ್ಮಿ ಪಾರ್ಟಿ ಪಕ್ಷದ ಆನೇಕಲ್ ಉಮೇದುವಾರಿಕೆ ಸಲ್ಲಿಕೆ: ಆನೇಕಲ್ ಮೀಸಲು ವಿಧಾನಾಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಮುನೇಶ್ ಎಂ ತನ್ನ ಕಾರ್ಯಕರ್ತರೊಡನೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಓದಿ: ಚುನಾವಣಾ ಅಖಾಡಕ್ಕಿಳಿದ ಪಿಎಸ್ಐ ಪರೀಕ್ಷೆ ಹಗರಣದ ಆರೋಪಿ.. 6.5 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ ಆರ್ಡಿಪಿ