ಬೆಂಗಳೂರು: 15 ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕರಲ್ಲಿ ಕಾಂಗ್ರೆಸ್ನ ಇಬ್ಬರನ್ನು ಹೊರತುಪಡಿಸಿ ಇತರ 13 ಜನ ಶಾಸಕರು ಇಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಯಿಂದ ಗೆದ್ದಿದ್ದ 12, ಓರ್ವ ಪಕ್ಷೇತರ ಸೇರಿ 13 ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಸಿಎಂ ಬಿಎಸ್ವೈ ಹಾಗೂ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.
ಮೊದಲಿಗೆ ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ, ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ್, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ, ಯಲ್ಲಾಪುರ ಕ್ಷೇತ್ರದ ಶಿವರಾಮ ಹೆಬ್ಬಾರ್, ವಿಜಯನಗರ ಕ್ಷೇತ್ರದ ಆನಂದ್ ಸಿಂಗ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಸುಧಾಕರ್, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಗೋಪಾಲಯ್ಯ, ಹೊಸಕೋಟೆ ಕ್ಷೇತ್ರದ ಶರತ್ ಬಚ್ಚೇಗೌಡ , ಕೆ.ಆರ್ ಪೇಟೆ ಕ್ಷೇತ್ರದ ನಾರಾಯಣಗೌಡ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.
ರಾಣೆಬೆನ್ನೂರು ಕ್ಷೇತ್ರದ ಅರುಣ್ ಕುಮಾರ್ ಭಗವಂತ ಹಾಗು ಕೊಟ್ಟೂರೇಶ್ವರನ ಹೆಸರಿನಲ್ಲಿ, ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್ ಭಗವಂತ ಹಾಗೂ ಜಗಜ್ಯೋತಿ ಬಸವವೇಶ್ವರ ಹೆಸರಿನಲ್ಲಿ, ಕೆ.ಆರ್ ಪುರಂ ಕ್ಷೇತ್ರದ ಬೈರತಿ ಬಸವರಾಜ್ ಸತ್ಯ ಮತ್ತು ನಿಷ್ಠೆ ಹೆಸರಿನಲ್ಲಿ,ಯಶವಂತಪುರ ಕ್ಷೇತ್ರದ ಎಸ್.ಟಿ ಸೋಮಶೇಖರ್ ಸತ್ಯ-ನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ ಎಲ್ಲಾ ಶಾಸಕರಿಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನದ ಪುಸ್ತಕ ಮತ್ತು ಸದನದ ನಿಯಮಾವಳಿ ಪುಸ್ತಕವನ್ನು ನೀಡಿ ಶುಭ ಕೋರಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಸ್ವಾಭಿಮಾನಿ ಪದ ಬಳಸಿ ಜಯಘೋಷ ಕೂಗಿದರು. ನಂತರ ಬಿಜೆಪಿಯ ಅರುಣ್ ಕುಮಾರ್ ಪರ ಬಿಜೆಪಿ ಬೆಂಬಲಿಗರು ಘೋಷಣೆ ಕೂಗಿದರು. ಆ ಸಮಯದಲ್ಲಿ ಒಂದು ರೀತಿಯ ಶಕ್ತಿ ಪ್ರದರ್ಶನದ ರೀತಿಯ ಘೋಷಣೆಗಳು ಮೊಳಗಿದವು,
ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಮತ್ತು ಹುಣಸೂರು ಶಾಸಕ ಮಂಜುನಾಥ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಕಾಂಗ್ರೆಸ್ ನಾಯಕರ ಅನುಪಸ್ಥಿತಿ ಕೂಡ ಕಂಡುಬಂತು.