ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಿರುವುದಕ್ಕೆ ಶಾಸಕ ಕೃಷ್ಣಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ, ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ್ದರು. ಈ ವೇಳೆ ಕ್ಷೇತ್ರದಲ್ಲಿನ ಸಮಸ್ಯೆ, ಅನುದಾನ ಕಡಿತ ವಿಚಾರ ಸಂಬಂಧ ಸಿಎಂ ಬಿಎಸ್ವೈ ಜೊತೆ ಮಾತುಕತೆ ನಡೆಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಹಿಂದಿನ ಸರ್ಕಾರ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಈ ಸರ್ಕಾರ ಅದರಲ್ಲಿ 300 ಕೋಟಿ ರೂ ಅನುದಾನ ಕಡಿತ ಮಾಡಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗಿದೆ. ಕೂಡಲೇ ಕಡಿತಗೊಳಿಸಿರುವ ಅನುದಾನ ಮರಳಿಸಬೇಕು ಎಂದು ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ನಮ್ಮ ಕ್ಷೇತ್ರದಲ್ಲೇ ಬೇರೆ ಕ್ಷೇತ್ರಗಳ ಕಸ ವಿಲೇವಾರಿ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿ ಇಲ್ಲೇ ತ್ಯಾಜ್ಯ ವಿಲೇವಾರಿ ಮಾಡೋದು ಎಷ್ಟು ಸರಿ ಅನ್ನೋದು ನಮ್ಮ ಕ್ಷೇತ್ರದ ಜನರ ಪ್ರಶ್ನೆಯಾಗಿದೆ. ಇವತ್ತು ಬೆಳಗ್ಗೆ ಅನುದಾನ ಕಡಿತ ಖಂಡಿಸಿ ಪ್ರತಿಭಟನೆ ನಡೆಸಿದೆವು. ಈಗ ಸಿಎಂಗೆ ಅನುದಾನ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದೇವೆ. ಸಿಎಂಗೆ ಸಮಸ್ಯೆ ಅರ್ಥವಾಗಿದೆ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಅವರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.