ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಹೆಸರು ಪ್ರಸ್ತಾಪವಾಗುತ್ತಿರುವ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜಮೀರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ವಿವರಣೆ ಪಡೆದಿದ್ದಾರೆ.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸಿದ್ದರಾಮಯ್ಯರಿಗೆ ಮಾಹಿತಿ ನೀಡಿದ ಜಮೀರ್, ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ನನ್ನ ಪಾರ್ಟನರ್ಶಿಪ್ನಲ್ಲಿ ಕ್ಯಾಸಿನೋ ವ್ಯವಹಾರ ಇದೆ. ಆಡಳಿತಾರೂಢ ಪಕ್ಷದ ಬಹಳ ಜನರಿಗೆ ಇದರ ಬಗ್ಗೆ ಗೊತ್ತಿದೆ. ಗೊತ್ತಿರೋ ಸಚಿವರು ಸುಮ್ಮನಿದ್ದಾರೆ. ನಮ್ಮ ಪಕ್ಷದಿಂದ ಹೋಗಿ ಸಚಿವರಾದವರಿಗೂ ಕ್ಯಾಸಿನೋ ವ್ಯವಹಾರ ಗೊತ್ತಿದೆ. ಶ್ರೀಲಂಕಾಕ್ಕೆ ಬಹಳ ಬಿಜೆಪಿ ನಾಯಕರು ಹೋಗಿದ್ದಾರೆ. ಅವರ ಪಾಸ್ಪೋರ್ಟ್ ಡಿಟೇಲ್ಸ್ ನೋಡಿದರೆ ಗೊತ್ತಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.
ಕ್ಯಾಸಿನೋಗೆ ಹೋದವರು ಶ್ರೀಲಂಕಾಕ್ಕೆ ಹೋದಾಗ ನನಗೆ ಮಾಹಿತಿ ಕೇಳಿದ್ದಾರೆ. ಅಲ್ಲಿಯ ವಹಿವಾಟು ಕುರಿತು ಆತ್ಮೀಯತೆಯಲ್ಲಿ ಮಾಹಿತಿ ಪಡ್ಕೊಂಡಿದ್ದಾರೆ. ನಾನು ಸಂಬರಗಿ ಮೇಲೆ ಕೇಸ್ ಹಾಕ್ತಿದ್ದೇನೆ. ಕೋರ್ಟ್ ಅನುಮತಿ ಕೊಟ್ಟಿದೆ. ನನ್ನ ಸಹಿಸದವರು ಇದರ ಹಿಂದಿದ್ದಾರೆ. ನಾನು ಅಂತಹ ಯಾವ ಕೆಲಸವೂ ಮಾಡಿಲ್ಲ. ಚಿನ್ನ, ಗಾಂಜಾದಂತಹ ವ್ಯವಹಾರ ನಾನು ಮಾಡಿಲ್ಲ. ನನ್ನ ಮೇಲೆ ಬರ್ತಿರೋ ಆರೋಪ ರಾಜಕೀಯ ಪ್ರೇರಿತ ಎಂದು ಸಿದ್ದರಾಮಯ್ಯಗೆ ವಿವರಣೆ ಕೊಟ್ಟಿದ್ದಾರೆ.
ಸಂಜಾನಾ ಯಾರು ಅಂತ ಗೊತ್ತಿಲ್ಲ. ಎಂದೂ ನೇರವಾಗಿ ಭೇಟಿಯಾಗಿಲ್ಲ. ಫಜೀಲ್ ನನಗೆ ಗೊತ್ತು. ನಾಲ್ಕು ವರ್ಷಗಳಿಂದ ನನ್ನ ಜತೆ ಇಲ್ಲ. ಯಾರೋ ಒಬ್ಬರು ನನ್ನ ಜತೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ. ಅವನು ಮಾಡಿದ ಕೆಲಸಕ್ಕೆ ನಾನು ಜವಾಬ್ದಾರನಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಬೆಳೆಯುತ್ತಿರುವುದೇ ಇದಕ್ಕೆಲ್ಲ ಕಾರಣ. ಸಂಬರಗಿ ಯಾರು ಅಂತ ಗೊತ್ತಿಲ್ಲ. ನನ್ನ ಹೆಸರು ಯಾಕೆ ಪ್ರಸ್ತಾಪ ಮಾಡಿದ್ದರೋ ಗೊತ್ತಿಲ್ಲ. ನಾನು ಇವರ ವಿರುದ್ಧ ಕೋರ್ಟ್ನಲ್ಲಿ ಕೇಸ್ ದಾಖಲು ಮಾಡಿದ್ದೇನೆ. ಅಲ್ಲಿಯೇ ಅವರ ವಿರುದ್ಧ ಹೋರಾಟ ಮಾಡ್ತೀನಿ ಎಂದು ವಿವರಣೆ ನೀಡಿದರು.
ನನ್ನ ಆಸ್ತಿ ಸರ್ಕಾರಕ್ಕೆ ಬಿಟ್ಟು ಕೊಡ್ತೇನೆ: ಇದಕ್ಕೂ ಮುನ್ನ ಚಾಮರಾಜಪೇಟೆಯಲ್ಲಿ ಮಾತನಾಡಿದ ಜಮೀರ್, ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯ, ಈಗ ಇಲ್ಲ. ಯಾರಾರೋ ಬರ್ತಿರ್ತಾರೆ. ಅವರೆಲ್ಲಾ ಆಪ್ತರು ಅಂತಾ ಹೇಳೋಕ್ಕಾಗುತ್ತಾ? ಎಂದು ಪ್ರಶ್ನಿಸಿದರು.
ಸರ್ಕಾರ ಯಾವುದಿದೆ?, ಕಾಂಗ್ರೆಸ್ ಸರ್ಕಾರ ಇದೆಯಾ? ಬಿಜೆಪಿ ಸರ್ಕಾರ ಇದೆ. ಸಂಜನಾ ಎಲ್ಲಿದ್ದಾರೆ?, ಪೊಲೀಸ್ ಕಸ್ಟಡಿಯಲ್ಲಿದ್ದಾರೆ ತಾನೇ. ತನಿಖೆ ಮಾಡಲಿ. ನಾನು ಪ್ರಕರಣದಲ್ಲಿ ಇದ್ದದ್ದು ಸಾಬೀತಾದರೆ ರಾಜ್ಯದಲ್ಲಿರೋ ನನ್ನ ಆಸ್ತಿ ಸರ್ಕಾರಕ್ಕೆ ಕೊಟ್ಟು ಬಿಡುತ್ತೇನೆ ಎಂದರು.
ಸಂಬರಗಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂಬರಗಿ ಯಾರ್ರೀ ಕಾಂಜಿಪಿಂಜಿ. ಅವನು ಹೇಳೋದು ಕೇಳೋದ್ಯಾಕೆ?, ಸರ್ಕಾರ ತನಿಖೆ ಮಾಡಲಿ ನಾನು ಕಾನೂನು ಹೋರಾಟ ಮಾಡುತ್ತೇನೆ. ಸಂಜನಾರನ್ನು ನಾನು ಬೆಂಗಳೂರಲ್ಲಿ ನೋಡಿಲ್ಲ. ಶ್ರೀಲಂಕಾ ಯಾಕೆ ಇಲ್ಲೇ ನೋಡಿಲ್ಲ ಎಂದು ವಿವರಿಸಿದರು.